

ಶಿರಹಟ್ಟಿ: ಬಸ್ ಪ್ರಯಾಣ ದರ ಹೆಚ್ಚಳಕ್ಕೆ ಖಂಡನೆ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಬಸ್ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ಪಟ್ಟಣದ ಬಸ್ ನಿಲ್ದಾಣ ಮತ್ತು ಮುಖ್ಯ ನೆಹರು ವೃತ್ತ ಸೇರಿ ವಿವಿಧೆಡೆ ಕೆಲ ಕಾಲ ಸರ್ಕಾರಿ ಬಸ್ ಮತ್ತು ಇತರೆ ವಾಹನಗಳನ್ನು ತಡೆದು ಸೋಮವಾರ ಪ್ರತಿಭಟನೆ ನಡೆಸಲಾಯಿತು.
ಎಬಿವಿಪಿ ನಗರ ಕಾರ್ಯದರ್ಶಿ ಪರಶುರಾಮ ಕಳ್ಳಿಮನಿ ಮಾತನಾಡಿ, ಸರ್ಕಾರಿ ಬಸ್ಗಳನ್ನೇ ಅವಲಂಬಿಸಿರುವ ಸಾವಿರಾರು ಜನರಿಗೆ ಬೆಲೆ ಏರಿಕೆ ಬರೆ ಎಳೆದಿದೆ. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರು-ಹೋಗುವವರ ಅನುಕೂಲಕ್ಕಾಗಿ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಎಬಿವಿಪಿ ತಾಲೂಕಾಧ್ಯಕ್ಷ ದರ್ಶನ್ ಅಕ್ಕಿ ಮಾತನಾಡಿ, ಗ್ರಾಮೀಣ ಪ್ರದೇಶಗಳಿಂದ ಶಾಲೆ-ಕಾಲೇಜ್ಗಳಿಗೆ ಬರು-ಹೋಗುವ ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಲಭ್ಯ ಕಲ್ಪಿಸಬೇಕು. ರಾಜ್ಯ ಸರ್ಕಾರ ಏರಿಕೆ ಮಾಡಿರುವ ಬಸ್ ಪ್ರಯಾಣ ದರ ಇಳಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಗದಗ ಸಾರಿಗೆ ಘಟಕದ ಡಿಎಂಎ ಅಧಿಕಾರಿಗಳ ಮೂಲಕ ಸಾರಿಗೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ವಿದ್ಯಾರ್ಥಿಗಳು ಮಾತನಾಡಿ, ಪಟ್ಟಣದ ಎಫ್.ಬಿ. ಸರ್ಕಾರಿ ಕಾಲೇಜ್ಗೆ ಬಸ್ ಸ್ಟಾಪ್ ಒದಗಿಸಬೇಕು. ಮಾಗಡಿಯಿಂದ ಶಿರಹಟ್ಟಿಗೆ ಬೆಳಗ್ಗೆ 8 ಗಂಟೆ ಮತ್ತು ಸಂಜೆ 5 ರಿಂದ 5:30 ಗಂಟೆಗೆ ಬಸ್ ಒದಗಿಸಬೇಕು. ಯಳವತ್ತಿ ಗ್ರಾಮದಿಂದ ಬೆಳಗ್ಗೆ 8.30 ಬಸ್ ಬಿಡಬೇಕು. ಸಂಜೆ ಪಟ್ಟಣದಿಂದ ವಿವಿಧ ಗ್ರಾಮಗಳಿಗೆ 5 ಗಂಟೆಗೆ ಬಸ್ಗಳನ್ನು ಒದಗಿಸಬೇಕು. ಮುಳಗುಂದದಿಂದ ಪಟ್ಟಣಕ್ಕೆ ಬರಲು ಬೆಳಗ್ಗೆ 9 ಗಂಟೆಗೆ ಮತ್ತು ಹೋಗಲು 5 ರಿಂದ 6 ಗಂಟೆಗೆ ಒಳಗೆ ಬಸ್ ಬಿಡಬೇಕು. ಗದಗ ನಗರಕ್ಕೆ ಬೆಳಗ್ಗೆ 7 ರಿಂದ 9 ಗಂಟೆಗಳ ಒಳಗೆ ನಾಲ್ಕು ಬಸ್ಗಳನ್ನು ಬಿಡಬೇಕು. ಸಂಜೆ ಪಟ್ಟಣಕ್ಕೆ ಬರಲು 5 ರಿಂದ 6 ಗ.ಟೆಯೊಳಗೆ ಮೂರು ಬಸ್ಗಳನ್ನು ಓಡಿಸಬೇಕು. ಬೇಡಿಕೆ ಈಡೇರಿದ್ದಲ್ಲಿ ಮತ್ತೆ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೆಎಸ್ಆರ್ಟಿಸಿ ಡಿಎಂಎ ಮಾತನಾಡಿ, ಮುಂದಿನ ದಿನಗಳಲ್ಲಿ ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಬಸ್ ಸೌಲಭ್ಯ ಕಲ್ಪಿಸಲಾಗುವುದು. ಸದ್ಯಕ್ಕೆ ಪ್ರಯಾಣಿಕರು ಮತ್ತು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಪ್ರತಿಭಟನೆ ಕೈಬಿಡಬೇಕು ಎಂದು ಮನವೊಲಿಸಿದರು. ಬಳಿಕ ಪ್ರತಿಭಟನಾನಿರತರು ಪ್ರತಿಭಟನೆ ಹಿಂಪಡೆದರು.