

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ವಿವಿಧ ತರಗತಿಯ ವಿದ್ಯಾರ್ಥಿಗಳು ವಿವಿ ಬಳಿ ಬುಧವಾರ ರಸ್ತೆ ತಡೆದು ಪ್ರತಿಭಟಿಸಿದರು.
ಪ್ರತಿ ವರ್ಷ ಸಾರಿಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಮೇಲಿಂದ ಮೇಲೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗುತ್ತಿದೆ. ಆದರೆ, ಇಲ್ಲಿಯವರೆಗೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಬರುತ್ತಿಲ್ಲ. ಪರಿಣಾಮ ಬೆಳಗ್ಗೆ, ಸಂಜೆ ಸಮಯದಲ್ಲಿ ವಿದ್ಯಾರ್ಥಿಗಳು ಸಮಸ್ಯೆ ಎದುರಿ ಸುತ್ತಿದ್ದಾರೆ. ಬಸ್ ಸೌಲಭ್ಯ ಇಲ್ಲದಿರುವ ಕಾರಣ ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಯಲ್ಲಿ ಬೆಳಗ್ಗೆ 9 ಗಂಟೆಗೆ ತರಗತಿ ಆರಂಭವಾಗುತ್ತವೆ. ಆದರೆ, ನಗರದ ಕೇಂದ್ರ, ಸಿಟಿ ಬಸ್ ನಿಲ್ದಾಣಗಳಿಂದ ವಿವಿಗೆ ಬರಲು ಬಸ್ ಸೌಲಭ್ಯ ಇಲ್ಲದಿರುವ ಕಾರಣ ಸಮಯಕ್ಕೆ ಸರಿಯಾಗಿ ತರಗತಿಗಳಿಗೆ ಹಾಜರಾಗುವುದು ಕಷ್ಟವಾಗುತ್ತಿದೆ. ಸಂಜೆ 5 ಗಂಟೆಗೆ ತರಗತಿ ಮುಗಿಸಿಕೊಂಡು ವಾಪಸ್ ಊರುಗಳಿಗೆ, ವಸತಿ ನಿಲಯಗಳಿಗೆ ಹೋಗಬೇಕಾದರೆ ಬಸ್‌ಗಳು ಇಲ್ಲ.
ಒಮ್ಮೊಮ್ಮೆ ರಾತ್ರಿ 8 ಗಂಟೆಯವರೆಗೆ ಕಾದು ಕುಳಿತರೂ ಬಸ್ ಬರುವುದಿಲ್ಲ. ಇದರಿಂದಾಗಿ ವಿದ್ಯಾರ್ಥಿನಿಯರು ನಿತ್ಯ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಹೆದ್ದಾರಿ ಮಾರ್ಗವಾಗಿ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ಕಾಗವಾಡದಿಂದ ಬೆಳಗಾವಿ ನಗರಕ್ಕೆ ಬಂದು ಹೋಗುವ ಸಾರಿಗೆ ಬಸ್‌ಗಳು ರಾಣಿ ಚನ್ನಮ್ಮ ವಿವಿ ಕ್ರಾಸ್‌ನಲ್ಲಿ ನಿಲುಗಡೆ ಮಾಡುತ್ತಿಲ್ಲ. ಪರಿಣಾಮ ನಗರಕ್ಕೆ ಹೋಗಿ ವಾಪಸ್ ಬರಬೇಕಾಗಿದೆ ಎಂದು ವಿದ್ಯಾರ್ಥಿಗಳು ದೂರಿದರು.
ಈ ಮಾರ್ಗದಲ್ಲಿ ಆದಾಯ ಬರುವುದಿಲ್ಲ ಎಂದು ಸಾರಿಗೆ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಬಸ್ ಬಿಡುತ್ತಿಲ್ಲ. ಬಿಟ್ಟರೂ ಡಕೋಟಾ ಬಸ್ ಬಿಡಲಾಗುತ್ತಿದೆ. ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದರು. ವಿದ್ಯಾರ್ಥಿಗಳಾದ ರಾಹುಲ ಪಾಟೀಲ, ಎಂ.ಎಸ್.ಜಯಶ್ರೀ, ಮಂಜುನಾಥ ನಾಯಕ, ವಿಶ್ವನಾಥ, ಪ್ರಿಯಾಂಕಾ, ಕವಿತಾ, ಮಹೇಶ, ರವಿಕುಮಾರ, ರಮೇಶ ಇದ್ದರು.