ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿ ಸಾವು-ಸಂಬಂಧಿಕರ ಪ್ರತಿಭಟನೆ

Nirupadi
Published on

ಭಟ್ಕಳ: ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗಾಣದಾಳ ಗ್ರಾಮದ ವಿದ್ಯಾರ್ಥಿ ಬಾವಿಗೆ ಬಿದ್ದು ಮೃತಪಟ್ಟ ಘಟನೆಗೆ ಶಿಕ್ಷಕರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಬಾಲಕನ ಸಂಬಂಧಿಕರು ಗುರುವಾರ ಪ್ರತಿಭಟನೆ ನಡೆಸಿದರು.

ಗಾಣದಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 8ನೇ ತರಗತಿ ವಿದ್ಯಾರ್ಥಿ ನಿರುಪಾದಿ ದುರ್ಗಪ್ಪ ಹರಿಜನ (14) ಬುಧವಾರ ಮೃತಪಟ್ಟ ಸುದ್ದಿ ಕೇಳಿ ಆತನ ಸಂಬಂಧಿಕರು ಭಟ್ಕಳಕ್ಕೆ ಆಗಮಿಸಿದ್ದರು. ಬಾಲಕ ಮೃತಪಟ್ಟ ಸ್ಥಳ ವೀಕ್ಷಿಸಿ ದಿಢೀರ್ ಪ್ರತಿಭಟನೆ ನಡೆಸಿದರು. ಬಾಲಕನ ಸಾವಿಗೆ ಶಿಕ್ಷಕರೇ ಕಾರಣ. ಕಳೆದ ವಾರವಷ್ಟೇ ಮುರ್ಡೇಶ್ವರದಲ್ಲಿ ನಾಲ್ವರು ವಿದ್ಯಾರ್ಥಿನಿಯರು ಮೃತಪಟ್ಟ ಹಿನ್ನೆಲೆಯಲ್ಲಿ ಪ್ರವಾಸ ಬೇಡವೆಂದರೂ ಮಕ್ಕಳನ್ನು ಕರೆದುಕೊಂಡು ಬಂದಿದ್ದಾರೆ. ಪ್ರತಿ 7 ಮಕ್ಕಳಿಗೆ ಒಬ್ಬ ಶಿಕ್ಷಕರಿರುತ್ತಾರೆ ಎಂದು ನಮ್ಮ ಮನವೊಲಿಸಿದ್ದರು. ಆದರೆ, ಶಿಕ್ಷಕರ ತಾರತಮ್ಯ ನೀತಿಯಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿದರು. ತಪ್ಪಿತಸ್ಥ ಶಿಕ್ಷಕರನ್ನು ಸ್ಥಳಕ್ಕೆ ಕರೆದುಕೊಂಡು ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.

ಸ್ಥಳದಲ್ಲೇ ಇದ್ದ ತಹಸೀಲ್ದಾರ್ ನಾಗೇಂದ್ರ ಶೆಟ್ಟಿ, ಶಹರ ಠಾಣೆ ಪಿಐ ಗೋಪಿಕೃಷ್ಣ ಅವರು ಪ್ರತಿಕ್ರಿಯಿಸಿ, ಘಟನೆ ಬಗ್ಗೆ ದೂರು ಕೊಡಿ, ಪ್ರತಿಭಟನೆ ಬೇಡ ಎಂದು ಮನವೊಲಿಸಲು ಪ್ರಯತ್ನಿಸಿದರೂ ಸಂಬಂಧಿಕರು ಪಟ್ಟು ಸಡಿಲಿಸಲಿಲ್ಲ. ಕೊನೆಗೆ ಅವರನ್ನು ಅಲ್ಲಿಂದ ಮೃತದೇಹ ಇರುವ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವಲ್ಲಿ ಯಶಸ್ವಿಯಾದರು. ಅಲ್ಲಿಯೂ ಪ್ರತಿಭಟನೆ ಮುಂದುವರಿಸಿದ ಸಂಬಂಧಿಕರು, ಶಿಕ್ಷಕರನ್ನು ತಕ್ಷಣ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಕೊನೆಗೂ ಆಕ್ರೋಶಿತರನ್ನು ಮನವೊಲಿಸಲು ಪೊಲೀಸರು ಯಶಸ್ವಿಯಾಗಿ ಕುಟುಂಬಸ್ಥರಿಂದ ದೂರನ್ನು ಸ್ವೀಕರಿಸಿದರು. ಬಳಿಕ ವಿದ್ಯಾರ್ಥಿಯ ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.

ಇದಕ್ಕೂ ಪೂರ್ವದಲ್ಲಿ ಕುಟುಂಬಸ್ಥರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯಕ್ಕೆ ಭೇಟಿ ನೀಡಿ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು. ಡಿವೈಎಸ್ಪಿ ಮಹೇಶ ಕೆ. ಇತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net