ಸಮಸ್ಯೆಗೆ ಮಕ್ಕಳ ಗ್ರಾಮ ಸಭೆ ವೇದಿಕೆ

26BK1
Published on

ಬಸವಕಲ್ಯಾಣ: ಶಾಲೆಯಲ್ಲಿ ಕುಡಿಯಲು ಶುದ್ಧ ನೀರಿಲ್ಲ, ಶಾಲೆ ಕೋಣೆ ದುರಸ್ತಿ ಆಗಿಲ್ಲ. ಶಿಕ್ಷಕರ ಕೊರತೆ ನೀಗಿಲ್ಲ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಗೃಹವಿಲ್ಲ. ಹೀಗೆ ಹಲವು ಸಮಸ್ಯೆಗಳನ್ನು ವಿದ್ಯಾರ್ಥಿಗಳು ಅನಾವರಣಗೊಳಿಸಿದ ಪ್ರಸಂಗ ಜರುಗಿತು.
ಬೆಟಬಾಲಕುಂದಾ ಗ್ರಾಮ ಪಂಚಾಯಿತಿ ಮತ್ತು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ಆಶ್ರಯದಲ್ಲಿ ಬೆಟಬಾಲಕುಂದಾ ಗ್ರಾಪಂ ಸಭಾ ಭವದಲ್ಲಿ ಶುಕ್ರವಾರ ಆಯೋಜಿಸಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಖಂಡಾಳ, ಗೌರ, ಗೌರ ತಾಂಡ, ಹಾಗೂ ಬೆಟಬಾಲಕುಂದಾ ಗ್ರಾಮದ ವಿದ್ಯಾರ್ಥಿಗಳು ಅಧಿಕಾರಿಗಳ ಮುಂದೆ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಶುದ್ಧ ಕುಡಿಯುವ ನೀರಿಲ್ಲ, ಶಾಲೆ ಕೊಠಡಿಗಳ ದುರಸ್ತಿ ಆಗಬೇಕು, ಶಾಲೆ ತಡೆಗೋಡೆ ನಿರ್ಮಿಸಬೇಕು, ಶಿಕ್ಷಕರ ಕೊರತೆ ನೀಗಿಸಬೇಕು, ಚರಂಡಿ, ಅಕ್ರಮ ಸರಾಯಿ ಮಾರಾಟ, ಶಾಲಾವರಣದಲ್ಲಿ ಪುಂಡರ ಹಾವಳಿ ಸೇರಿ ಹಲವು ಸಮಸ್ಯೆ ವಿದ್ಯಾರ್ಥಿಗಳು ಗಮನಕ್ಕೆ ತಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ತಜಕಿಸ್ತಾನ್ ದೇಶದ ಬೂತಾರ್‌ಖಾನ್, ಕಲ್ಕತ್ತಾದ ಕೋಯಲ್, ರೋಹಿತ್ ಸಭೆಯನ್ನು ವೀಕ್ಷಿಸಿದರು. ತಮ್ಮ ದೇಶ ಹಾಗೂ ರಾಜ್ಯಗಳಲ್ಲಿ ಇಂತಹ ಮಕ್ಕಳ ಸ್ನೇಹಿ ಕಾರ್ಯಕ್ರಮಗಳನ್ನು ಜಾರಿಗೆ ತರುವ ಕುರಿತು ಸರ್ಕಾರದ ಗಮನಕ್ಕೆ ತರಲು ಪ್ರಯತ್ನಿಸುವುದಾಗಿ ತಿಳಿಸಿದರು.
ಗ್ರೇಡ್-೨ ತಹಸೀಲ್ದಾರ್ ಪಲ್ಲವಿ ಬೇಳಕೆರೆ ಮಾತನಾಡಿ, ಸಾಧ್ಯವಿರುವ ಸಮಸ್ಯೆ ಗ್ರಾಪಂನಿಂದ ಬಗೆಹರಿಸಲಾಗುತ್ತದೆ. ಉಳಿದ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು. ಹಿಂಜರಿಕೆ ಇಲ್ಲದೆ ಸಮಸ್ಯೆಗಳಿದ್ದರೆ ನೇರವಾಗಿ ತಹಸಿಲ್ ಕಚೇರಿಗೆ ಸಂಪರ್ಕಿಸಬೇಕು ಎಂದರು.
ಅಬಕಾರಿ ಇಲಾಖೆ ಉಪ ನಿರೀಕ್ಷಕ ಸಾದಿಕ್ ಬಾಷಾ ಮಾತನಾಡಿ, ಕೆಲ ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿರುವ ಬಗ್ಗೆ ದೂರು ನೀಡಿದ್ದು, ಅಂಥ ಹಳ್ಳಿಗಳಿಗೆ ನಾನೇ ಭೇಟಿ ನೀಡಿ, ಅಕ್ರಮ ಸರಾಯಿ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದರು.
ಗ್ರಾಪಂ ಅಧ್ಯಕ್ಷ ಪ್ರಹ್ಲಾದ ರಾಠೋಡ್, ಮೈಸೂರಿನ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ ನಿರ್ದೇಶಕಿ ಸರಸ್ವತಿ ಮಾತನಾಡಿದರು. ಸಮುದಾಯ ಆರೊಗ್ಯ ಅಧಿಕಾರಿ ದಯಾನಂದ, ಪ್ರಮುಖರಾದ ಅಲಿಕಾ ಬಾನು, ಕೌಸರ್ ಬಾನು, ಸುಧಾಕರ ಮಹೇಂದ್ರಕರ್, ನಟರಾಜ ಇತರರಿದ್ದರು.
ಆರ್‌ಎಲ್‌ಎಚ್‌ಪಿ ಜಿಲ್ಲಾ ಸಂಯೋಜಕ ನಾಗರಾಜ ಶೀಲವಂತ ಸ್ವಾಗತಿಸಿದರು. ಸುನಂದಾ ವಂದಿಸಿದರು, ಸಂಪತ ಕಟ್ಟಿ ನಿರೂಪಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net