ಎಐಡಿಎಸ್‌ಒನಿಂದ ವಿದ್ಯಾರ್ಥಿ ಪ್ರಣಾಳಿಕೆ

14
Published on

ಮೈಸೂರು: ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಐಡಿಎಸ್‌ಒನಿಂದ ನಗರದಲ್ಲಿ ಮಂಗಳವಾರ ವಿದ್ಯಾರ್ಥಿ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು.
ಮೈಸೂರು ವಿಶ್ವವಿದ್ಯಾಲಯದ ಕಾರ್ಯಸೌಧ (ಕ್ರಾಫರ್ಡ್ ಹಾಲ್) ಮುಂಭಾಗ ಪ್ರಣಾಳಿಕೆ ಬಿಡುಗಡೆ ಮಾಡಿದ ಮುಖಂಡರು, ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್‌ಇಪಿ ಅನ್ನು ಹಿಂಪಡೆಯಬೇಕು. ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು, ನಾಲ್ಕು ವರ್ಷದ ಪದವಿ ಹಿಂಪಡೆಯಬೇಕು, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು ಎನ್ನುವುದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಸಬೇಕು ಎಂದು ಒತ್ತಾಯಿಸಲಾಯಿತು.
ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಮಾತನಾಡಿ, ಎಲ್ಲ ಸರ್ಕಾರಗಳು ದೇಶದ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿವೆ. ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಜಾತಿ-ಧರ್ಮದ ವಿಷಯಗಳನ್ನು ಮುನ್ನೆಲೆಗೆ ತರುತ್ತಿವೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಪ್ರಜ್ಞಾವಂತಿಕೆಯಿಂದ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸಂಸತ್‌ನಲ್ಲಿ ಚರ್ಚೆ ಮಾಡುವ ರೀತಿ ಧ್ವನಿ ಎತ್ತಬೇಕಿದೆ ಎಂದರು.
ಪ್ರತಿಯೊಬ್ಬರಿಗೂ ಪ್ರಜಾತಾಂತ್ರಿಕ, ವೈಜ್ಞಾನಿಕ ಧರ್ಮನಿರಪೇಕ್ಷ ಶಿಕ್ಷಣವು ಖಾತ್ರಿಪಡಿಸುವಂತೆ ನಮ್ಮನ್ನಾಳುವ ಸರ್ಕಾರಗಳನ್ನು ಒತ್ತಾಯಿಸಬೇಕಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಒಕ್ಕೊರಲಿನಿಂದ ಮುನ್ನುಗ್ಗಬೇಕಿದೆ. ರಾಜ್ಯದಲ್ಲಿ ಅಪ್ರಜಾತಾಂತ್ರಿಕವಾಗಿ ಹೇರಿರುವ ಎನ್‌ಇಪಿ- 2020 ಅನ್ನು ಹಿಂಪಡೆದು ಜನಪರ ಶಿಕ್ಷಣ ನೀತಿಯನ್ನು ರೂಪಿಸಬೇಕು. ಶಿಕ್ಷಣಕ್ಕಾಗಿ ಕೇಂದ್ರ ಬಜೆಟ್‌ನಿಂದ ಶೇ.10 ಮತ್ತು ರಾಜ್ಯ ಬಜೆಟ್‌ನಿಂದ ಶೇ. 30ರಷ್ಟು ಮೀಸಲಿಡಬೇಕು. ಎಲ್ಲರಿಗೂ ವೈಜ್ಞಾನಿಕ, ಧರ್ಮನಿರಪೇಕ್ಷ, ಪ್ರಜಾಸತ್ತಾತ್ಮಕ ಮತ್ತು ಉಚಿತ ಶಿಕ್ಷಣವನ್ನು ಖಾತ್ರಿಪಡಿಸುವ ಕುರಿತು ಚರ್ಚೆ ನಡೆಯಬೇಕು ಎಂದರು.
ವಿಲೀನದ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ನಿಲ್ಲಿಸಬೇಕು, ಎಲ್ಲ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಮೂಲ ಸೌಕರ್ಯಗಳ ಒದಗಿಸಬೇಕು. ಹಾಸ್ಟೆಲ್ ಸೌಲಭ್ಯವನ್ನು ಒದಗಿಸಿ ಅರ್ಹರಿಗೆ ವಿದ್ಯಾರ್ಥಿವೇತನ ನೀಡಬೇಕು, ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಒದಗಿಸಬೇಕು. ನೈಜ, ವೈಜ್ಞಾನಿಕ ಜ್ಞಾನವನ್ನು ಪಠ್ಯದ ಮೂಲಕ ಒದಗಿಸಬೇಕು. ಖಾಸಗಿ, ವಿದೇಶಿ ವಿಶ್ವವಿದ್ಯಾಲಯಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಸೇರಿದಂತೆ ಶೈಕ್ಷಣಿಕ ಪ್ರಗತಿಗೆ ಅನುಕೂಲವಾದ ಚರ್ಚೆ ನಡೆಯಬೇಕು ಎಂದು ಹೇಳಿದರು.
ಎಐಡಿಎಸ್‌ಒ ಮೈಸೂರು ಜಿಲ್ಲಾ ಉಪಾಧ್ಯಕ್ಷರಾದ ನಿತಿನ್, ಸ್ವಾತಿ, ಜಿಲ್ಲಾ ಕಾರ್ಯದರ್ಶಿ ಸಮಿತಿ ಸದಸ್ಯರಾದ ಚಂದ್ರಿಕಾ, ಚಂದನಾ, ಅಂಜಲಿ, ದಿಶಾ, ಬೀರಪ್ಪ, ಮುತ್ತು, ಅಭಿಷೇಕ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net