

ಹುಬ್ಬಳ್ಳಿ : ಸರ್ಕಾರಿ ಶಾಲೆಗಳ 9 ಹಾಗೂ 10ನೇ ತರಗತಿಗೂ ಮೊಟ್ಟೆ, ಚಿಕ್ಕಿ ಹಾಗೂ ಬಾಳೆಹಣ್ಣು ವಿತರಿಸುವ ಸರ್ಕಾರದ ನಿರ್ಧಾರ ಸ್ವಾಗತಿಸಿ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಸಲಹೆ ನೀಡಿ ಕುಂದಗೋಳ ತಾಲೂಕು ಮಳಲಿ ಗ್ರಾಮದ ಶ್ರೀ ಜಗದ್ಗುರು ಫಕ್ಕೀರೇಶ್ವರ ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಆಶಾ ನೆಹರು ಪಾಟೀಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಳೆದ ಆಗಸ್ಟ್ 21ಕ್ಕೆ ಪತ್ರ ಬರೆದಿದ್ದಳು.
ಪತ್ರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ, ನಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಇಷ್ಟಪಟ್ಟು ಶ್ಲಾಘಿಸಿದ ಮತ್ತು ನನ್ನ ಆರೋಗ್ಯದ ಕಾಳಜಿ ವಹಿಸುವಂತೆ ಅಕ್ಕರೆಯಿಂದ ಕೋರಿದ ಪುಟ್ಟ ಬಾಲಕಿಗೆ ಪ್ರೀತಿಯ ಅಪು್ಪಗೆ’ ಎಂದು ಬರೆದುಕೊಂಡಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತನ್ನ ಪತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದನ್ನು ತಿಳಿದು, ಅವರನ್ನು ಖುದ್ದಾಗಿ ಭೇಟಿ ಮಾಡಿ ಮಾತನಾಡಲು ವಿದ್ಯಾರ್ಥಿನಿ ಆಶಾ ಶನಿವಾರ ಬೆಳಗ್ಗೆ ಹುಬ್ಬಳ್ಳಿಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಳು. ವಿದ್ಯಾರ್ಥಿನಿಯನ್ನು ಭೇಟಿಯಾಗಿ ಕೈಕುಲುಕಿದ ಸಿಎಂ, ಸರ್ಕಾರದ ಕಾರ್ಯಕ್ರಮಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದರು.