ಅಪಘಾತಕ್ಕೆ ವಿದ್ಯಾರ್ಥಿ ಬಲಿ, ಕುಟುಂಬಸ್ಥರಿಂದ ಆತನ ಅಂಗಾಂಗ ದಾನಕ್ಕೆ ನಿರ್ಧಾರ

Accident Death
Published on

ನೆಲಮಂಗಲ: ಅಪಘಾತದಿಂದ ಮನೆಮಗನನ್ನು ಕಳೆದುಕೊಂಡು ನೋವಿನಲ್ಲಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವ ಕೆಲಸವನ್ನು ಮೃತನ ಮನೆಯವರು ಮಾಡಿದ್ದಾರೆ. ಅಂದರೆ, ಅಗಲಿರುವ ಯುವಕನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದಾರೆ.

ನೆಲಮಂಗಲ ತಾಲೂಕು ಬೂದಿಹಾಳ್​ ಗೇಟ್ ಬಳಿ ಬೈಕ್​ ಹಾಗೂ ಬೊಲೆರೊ ವಾಹನದ ನಡುವೆ ಅಪಘಾತ ಸಂಭವಿಸಿದ್ದು, ಇದರಲ್ಲಿ ಕುಲುವನಹಳ್ಳಿಯ ನಿವಾಸಿ ಅಭಿಷೇಕ್​ (18) ಎಂಬಾತ ಸಾವಿಗೀಡಾಗಿದ್ದಾನೆ. ಈತ ನೆಲಮಂಗಲ ಸಿದ್ಧಗಂಗಾ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿಯಾಗಿದ್ದ.

ಅಪಘಾತದ ತೀವ್ರತೆಗೆ ಅಭಿಷೇಕ್ ತಲೆಗೆ ಗಂಭೀರವಾದ ಗಾಯವಾಗಿತ್ತು. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಅಪಘಾತ ಸಂಭವಿಸಿದ ತಕ್ಷಣ ಬೊಲೆರೊ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ.

ಈತ ಕುಲುವನಹಳ್ಳಿ ನಿವಾಸಿ ರಮೇಶ್ ಮತ್ತು‌ ಭಾಗ್ಯಮ್ಮ ದಂಪತಿ ಪುತ್ರ. ಈತನ ಅಂಗಾಂಗ ದಾನಕ್ಕೆ ಕುಟುಂಬಸ್ಥರು ನಿರ್ಧರಿಸಿದ್ದು, ಮೊದಲಿಗೆ ನೇತ್ರವನ್ನು ಡಾ.ರಾಜ್​ಕುಮಾರ್ ಐ ಬ್ಯಾಂಕ್​ಗೆ ನೀಡಲಾಗುತ್ತಿದೆ. ಸ್ಥಳಕ್ಕೆ ನಾರಾಯಣ ನೇತ್ರಾಲಯ ವೈದ್ಯರು ಆಗಮಿಸಿ ಪ್ರಕ್ರಿಯೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net