ವಿದ್ಯಾರ್ಥಿ ಜೀವನ ಮರಳಿ ಬಾರದು

ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆ ಕಾರ್ಯಕ್ರಮವನ್ನು ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಐ.ಕೆ.ಬಿದ್ದಪ್ಪ ಉದ್ಘಾಟಿಸಿದರು. ದಯಾನಂದ, ರುದ್ರ, ರಘುರಾಜ್, ಬಸವರಾಜು, ವೇಣುಗೋಪಾಲ್ ಇತರರು ಇದ್ದರು.
ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪಠ್ಯೇತರ ಚಟುವಟಿಕೆ ಕಾರ್ಯಕ್ರಮವನ್ನು ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಐ.ಕೆ.ಬಿದ್ದಪ್ಪ ಉದ್ಘಾಟಿಸಿದರು. ದಯಾನಂದ, ರುದ್ರ, ರಘುರಾಜ್, ಬಸವರಾಜು, ವೇಣುಗೋಪಾಲ್ ಇತರರು ಇದ್ದರು.
Published on

ವಿರಾಜಪೇಟೆ: ವಿದ್ಯಾರ್ಥಿ ಜೀವನ ಅಮೂಲ್ಯವಾಗಿದ್ದು, ಅದನ್ನು ಮರಳಿ ಪಡೆಯಲು ಸಾಧ್ಯವಿಲ್ಲ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಪಠ್ಯೇತರ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಆರಂಭವು ಶಾಲೆ, ಕಾಲೇಜುಗಳಿಂದಲೇ ಆರಂಭವಾಗುತ್ತದೆ. ಅಂದರೆ ಇಂದಿಗೂ ಕಾಲೇಜಿನಲ್ಲಿ ಚುನಾವಣೆ ಮೂಲಕ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಿರುವುದು ಸಂತಸದ ವಿಚಾರವಾಗಿದೆ ಎಂದರು.

ಎಲ್ಲರನ್ನೂ ಸಮಾನತೆಯಿಂದ ಕಾಣುವ ಮೂಲಕ ಸಮಾಜದಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಜೀವನದಲ್ಲಿ ಉನ್ನತ ಸ್ಥಾನಕ್ಕೆ ಏರಿ ಬದುಕನ್ನು ಸಾರ್ಥಕ ಪಡಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮುಖ್ಯ ಅತಿಥಿಗಳಾಗಿದ್ದ ಕೊಡಗು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಸುರೇಶ್ ಅಲೆಟ್ಟಿ ಮಾತನಾಡಿ, ವಿದ್ಯಾರ್ಥಿ ಎಂದರೇ ಗುರಿಯನ್ನು ನಿಭಾಯಿಸುವ ವ್ಯವಸ್ಥೆ. ಕ್ರಿಯಾಶೀಲ ವ್ಯಕ್ತಿತ್ವವನ್ನು ವ್ಯಕ್ತಪಡಿಸುವ ವೇದಿಕೆಯೇ ಕಾಲೇಜು. ಇದಕ್ಕೆ ವೇದಿಕೆ ಒದಗಿಸುವುದು ವಿದ್ಯಾರ್ಥಿ ಸಂಘ ಎಂದು ವಿಶ್ಲೇಷಿಸಿದರು.

ವಿದ್ಯಾರ್ಥಿಗಳು ಕ್ರೀಡೆ, ಎನ್‌ಎಸ್‌ಎಸ್, ಎನ್‌ಸಿಸಿ ಸೇರಿದಂತೆ ಎಲ್ಲದರಲ್ಲಿಯೂ ಕ್ರಿಯಾಶೀಲರಾಗಿರಬೇಕು. ಜತೆಗೆ ಪರಿಸರ ಕಾಳಜಿ, ಸ್ವಚ್ಛತೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಪ್ರೊ. ಇಟ್ಟಿರ ಬಿದ್ದಪ್ಪ ಮಾತನಾಡಿ, ಪ್ರಜಾಪ್ರಭುತ್ವದ ತಳಹದಿಯಲ್ಲಿ ನೀವು ಕ್ರಿಯಾಶೀಲರಾಗಿ ತತ್ವ ಶೀಲರಾಗಿ ಉತ್ತಮ ಸಮಾಜವನ್ನು ನಿರ್ಮಿಸಲು ವಿದ್ಯಾರ್ಥಿ ಸಂಘವು ವೇದಿಕೆಯಾಗಿದೆ. ಕವಿ ಸಿದ್ದಯ್ಯ ಪುರಾಣಿಕರ ನುಡಿಯಂತೆ ಮೊದಲು ಮಾನವರಾಗಿ,ಯಾವುದೇ ಉನ್ನತ ಹುದ್ದೆಯಲ್ಲಿದ್ದರು ಮೊದಲು ಮಾನವೀಯ ಮೌಲ್ಯಗಳನ್ನು ಹೊಂದಿರಬೇಕು ಎಂದರು.

ಶಿಸ್ತು ಪಾಲಿಸುವುದರ ಮೂಲಕ ಜವಾಬ್ದಾರಿಯಿಂದ ಮುನ್ನಡೆದು ಶ್ರಮ ವಹಿಸಿ ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಮಾತನಾಡಿದರು. ವೇದಿಕೆಯಲ್ಲಿ ಸಾಂಸ್ಕೃತಿಕ ಸಮಿತಿ ಸಂಚಾಲಕ ಹಾಗೂ ರೋವರ್ಸ್ ಅಧಿಕಾರಿ ವೇಣುಗೋಪಾಲ್, ವಿದ್ಯಾರ್ಥಿ ಕ್ಷೇಮಪಾಲನ ಸಂಚಾಲಕ ಆರ್.ರಘುರಾಜ್, ಕ್ರೀಡಾ ಸಮಿತಿ ಸಂಚಾಲಕ ಎನ್. ಗುರುಪ್ರಸಾದ್, ಐಕ್ಯುಎಸಿ ಸಂಚಾಲಕ ಡಾ.ಕೆ.ಬಸವರಾಜು ಮತ್ತು ವಿದ್ಯಾರ್ಥಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ನೂತನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ಭೋದಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷರಾದ ಪ್ರೊ. ಬಿದ್ದಪ್ಪ, ಕುಲಸಚಿವ ಸುರೇಶ್ ಅಲೆಟ್ಟಿ ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭದಲ್ಲಿ ಉಪನ್ಯಾಸಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net