ವಿದ್ಯಾರ್ಥಿ ಜೀವನ ಜ್ಞಾನ ಸಂಪಾದನೆ ಕಾಲ: ಆದಿಚುಂಚನಗಿರಿ ಸ್ವಾಮೀಜಿ

Dr.Nirmalananda swamiji Prog. in AIT college
Published on

ಚಿಕ್ಕಮಗಳೂರು: ದೃಢ ಮನಸ್ಸು, ಕಠಿಣ ಪರಿಶ್ರಮ ಮತ್ತು ಶಿಸ್ತಿನಿಂದ ಮಾತ್ರ ಏನನ್ನಾದರೂ ಸಾಧಿಸಬಹುದು. ಶಿಸ್ತಿನ ಜೀವನಕ್ಕೆ ಒಳಪಡಿಸಿಕೊಂಡರೆ ಮಾತ್ರ ಜ್ಞಾನ ಸಂಪಾದನೆಯಾಗುತ್ತದೆ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ನಗರದ ಆದಿಚುಂಚನಗಿರಿ ತಾಂತ್ರಿಕ ಮಹಾ ವಿದ್ಯಾಲಯದಲ್ಲಿ ಮಂಗಳವಾರ ಮೊದಲ ವರ್ಷದ ಇಂಜಿನಿಯರಿಂಗ್ ಹಾಗೂ ಸ್ನಾತಕೋತ್ತರ ವಿಭಾಗದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸ್ವಾಗತ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪರಿಶ್ರಮದಿಂದ ಶಿಸ್ತು ಪ್ರಾಪ್ತಿ:

ನಾವು ಪರಿಶ್ರಮದಿಂದ ರೂಢಿಸಿಕೊಂಡಲ್ಲಿ ಮಾತ್ರ ಶಿಸ್ತು ನಮ್ಮಲ್ಲಿ ಬರುತ್ತದೆ. ಬಂಗಾರದ ತಟ್ಟೆಯಲ್ಲಿ ನಾವಿದ್ದೆಡೆಗೆ ಶಿಸ್ತು, ಯಶಸ್ಸು ಬರುವುದಿಲ್ಲ. ಮಳೆ ಬಂದಾಗ ನೀರಿನ ಪ್ರಮಾಣ ಅಧಿಕಗೊಳ್ಳುತ್ತದೆ. ಆದರೆ ಆಗ ಅದಕ್ಕೆ ಬೇಡಿಕೆಯೇ ಇರುವುದಿಲ್ಲ. ಬೇಸಿಗೆಯಲ್ಲಿ ನೀರೇ ದೊರಕುವುದಿಲ್ಲ. ಆ ವೇಳೆ ಬೇಡಿಕೆ ಅಧಿಕ. ಅದೇ ರೀತಿ ವಿದ್ಯಾರ್ಥಿ ಜೀವನದಲ್ಲಿ ಜ್ಞಾನ ಸಂಪಾದನೆಗೆ ವಿಫುಲ ಅವಕಾಶವಿರುತ್ತದೆ. ಅದನ್ನು ಸಂಗ್ರಹಿಸಿಕೊಂಡಲ್ಲಿ ಮುಂದೆ ಅದು ಬದುಕಿನ ಉಪಯೋಗಕ್ಕೆ ಬರುತ್ತದೆ ಎಂದರು. ವಿದ್ಯಾರ್ಥಿ ಜೀವನ ಬದುಕಿಗೆ ಬೆಳಕಾಗಿ ಅದನ್ನು ಪ್ರಜ್ವಲಿಸುವಂತೆ ಮಾಡಿಕೊಳ್ಳುವ ಸಮಯ. ನಮ್ಮೊಳಗೆ ಬೆಳಕಿದ್ದರೆ ಮಾತ್ರ ನಮ್ಮ ಸುತ್ತಲನ್ನೂ ಬೆಳಗಿಸಬಹುದು. ಪ್ರೀತಿ ಆಂತರ್ಯ ತುಂಬಿದ್ದರೆ ದ್ವೇಷಕ್ಕೆ ಅವಕಾಶವಿರುವುದಿಲ್ಲ ಎಂದು ಹೇಳಿದರು.

ಈಗ ಓದುವುದಷ್ಟೇ ಮುಖ್ಯ:

ಕಠಿಣ ಪರಿಶ್ರಮ ಮತ್ತು ಪಾಲಕರ ಪ್ರೋತ್ಸಾಹದಿಂದ ಇಂಜಿನಿಯರಿಂಗ್ ಕಲಿತು ಹೆಚ್ಚಿನ ಶಿಕ್ಷಣ ಪಡೆಯಲು ಬಯಸುವ ವಿದ್ಯಾರ್ಥಿಗಳು ಶಿಸ್ತಿನಿಂದ ಉತ್ತಮ ಅಧ್ಯಯನಕ್ಕೆ ಅಗತ್ಯವಾದ ವಾತಾವರಣ ರೂಪಿಸಿಕೊಳ್ಳಬೇಕು. ಈಗ ಓದುವುದಷ್ಟೇ ಮುಖ್ಯ. ನಂತರ ಏನಾಗಬೇಕೆಂಬ ಬಗ್ಗೆ ಯೋಚಿಸಬಹುದೆಂದು ಸಲಹೆ ನೀಡಿದರು. ಇಂಜಿನಿಯರಿಂಗ್ ಕಾಲೇಜಿಗೆ ಬಂದ ವಿದ್ಯಾರ್ಥಿಗಳು 18 ವರ್ಷಕ್ಕೆ ಕಾಲಿಟ್ಟವರಾಗಿ ಮತದಾನಕ್ಕೂ ಅರ್ಹರಾಗಿರುವುದರಿಂದ ಯಾರನ್ನು ಆಯ್ಕೆ ಮಾಡಬೇಕೆಂಬ ಜವಾಬ್ದಾರಿ ಇರುತ್ತದೆ. ಅದೇ ರೀತಿ ನಮ್ಮನ್ನು ನಾವು ನೋಡಿಕೊಂಡು ಭಾವನೆ ತಿದ್ದಿಕೊಳ್ಳಬೇಕು. ನಾವು ಮಾಡುವ ಕೆಲಸವನ್ನು ಸಮರ್ಥಿಸಿಕೊಳ್ಳುವ ಧೋರಣೆ ಹೊಂದಿರಬೇಕು ಎಂದರು. ವಿದ್ಯಾರ್ಥಿಗಳು ಕಲಿಕೆಯಲ್ಲಿ ಪೂರ್ಣ ಪ್ರಮಾಣದ ಶ್ರದ್ಧೆ ಇಟ್ಟು ಸಾಧನೆ ಮಾಡಿದಲ್ಲಿ ಜಗತ್ತಿನ ಎಲ್ಲೆಡೆ ಸ್ವಾಗತಕ್ಕೆ ಅರ್ಹರಾಗಬಹುದು. ಬದುಕಿನ ಆಯ್ಕೆಯನ್ನು ಸರಿಯಾದ ರೀತಿಯಲ್ಲಿ ಮಾಡಿಕೊಳ್ಳುವ ಶಕ್ತಿ ವಿದ್ಯಾರ್ಥಿಗಳಿಗಿದ್ದು, ಸಾಧನೆಯ ಹಾದಿಯಲ್ಲಿ ಯಾವುದೇ ವಿಚಾರಗಳನ್ನು ಅರ್ಧದಲ್ಲಿ ಬಿಟ್ಟು ಪಲಾಯನ ಮಾಡದೆ ಸಾಧಿಸಿ ತೋರಿಸಬೇಕಿದೆ ಎಂದು ಹೇಳಿದರು.

ಸವಾಲು ಎದುರಿಸುವ ಮುನ್ನೋಟ ಅಗತ್ಯ:

ಮಂಡ್ಯ ವಿವಿ ಕುಲಪತಿ ಡಾ.ಪುಟ್ಟರಾಜು ಮಾತನಾಡಿ, ಸವಾಲುಗಳನ್ನು ಎದುರಿಸುವ ಮುನ್ನೋಟ ವಿದ್ಯಾರ್ಥಿಗಳಿಗಿರಬೇಕು. ಪಠ್ಯದ ಜತೆಗೆ ಜೀವನ ಕೌಶಲಗಳನ್ನೂ ಕಲಿಯಬೇಕಾಗಿದೆ. ಹೊಸ ಶಿಕ್ಷಣ ನೀತಿ ಅದಕ್ಕೆ ಆದ್ಯತೆ ನೀಡಿದೆ. ನಮ್ಮ ದೇಹ ಮತ್ತು ಮನಸ್ಸನ್ನು ನಿಯಂತ್ರಿಸಲು ಅದಕ್ಕೆ ಪೂರಕವಾಗಿ ಯೋಗದ ಮೊರೆ ಹೋಗಬೇಕು ಎಂದರು.

ಸಂಸ್ಥೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಎನ್.ಎಸ್.ರಾಮೇಗೌಡ ಮಾತನಾಡಿದರು. ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಎಐಟಿ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಪ್ರಾಚಾರ್ಯ ಡಾ.ಸಿ.ಟಿ.ಜಯದೇವ್, ಎಂಬಿಎ ವಿಭಾಗದ ಮುಖ್ಯಸ್ಥ ಕೆ.ಎಸ್.ಪ್ರಕಾಶರಾವ್, ಪ್ರೊ.ಸಿ.ಆರ್.ನಾಗವೇಣಿ, ಪತ್ರಕರ್ತ ಎಚ್.ಆರ್.ರಂಗನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net