ಕುವೆಂಪು ಕೃತಿಗಳಿಂದ ವಿದ್ಯಾರ್ಥಿ ಜೀವನ ವಿಕಾಸ

24 NMG 02 (6)
ನಾಗಮಂಗಲ ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಾಡೋಜ ಜಿ.ಕೃಷ್ಣಪ್ಪ ಅವರು ಬರೆದಿರುವ ನಮ್ಮ ಕುವೆಂಪು ಕೃತಿಯನ್ನು ಕುವೆಂಪು ವಿವಿ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಹಾಗೂ ಇತರ ಗಣ್ಯರು ಲೋಕಾರ್ಪಣೆ ಮಾಡಿದರು. ಡಾ.ಎಚ್.ಎಸ್.ರವೀಂದ್ರ, ನಾ.ಸು.ನಾಗೇಶ್, ಸಿ.ಕೆ.ರಾಮೇಗೌಡ, ಸಿ.ಆರ್.ಚಂದ್ರಶೇಖರ್, ದಯಾನಂದಕಟ್ಟೆ ಇದ್ದರು.
Published on

ನಾಗಮಂಗಲ: ಜೀವನದಲ್ಲಿ ಉನ್ನತ ಮಟ್ಟಕ್ಕೇರಿದವರೆಲ್ಲ ಪುಸ್ತಕ ಪ್ರೇಮಿಗಳಾಗಿದ್ದವರಾಗಿದ್ದು, ವಿದ್ಯಾರ್ಥಿಗಳು ಕುವೆಂಪು ಅವರ ಕೃತಿ ಓದಲು ನಿರತರಾದರೆ ಅವರ ಜೀವನ ವಿಕಾಸವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಚಿದಾನಂದಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ನಮ್ಮ ಕುವೆಂಪು ಕೃತಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.

ಕನ್ನಡ ಸಾಹಿತ್ಯದ 32 ಮಜಲುಗಳಲ್ಲಿ ಕುವೆಂಪು ತಮ್ಮ ಕೊಡುಗೆ ನೀಡಿದ್ದಾರೆ. ಸಾಹಿತ್ಯದಿಂದ ಜೀವನ ಪರಿಪೂರ್ಣವಾಗುತ್ತದೆ. ಯಾವುದೇ ಸಭೆ ಸಮಾರಂಭ ಕಾರ್ಯಕ್ರಮಗಳಲ್ಲಿ ಉಡುಗೊರೆಯಾಗಿ ಉತ್ತಮ ಪುಸ್ತಕಗಳನ್ನು ನೀಡುವ ಪರಿಪಾಠ ಬೆಳೆಸಿಕೊಳ್ಳಿ. ರಾಷ್ಟ್ರಕವಿ ಕುವೆಂಪುರವರ ಮೈಸೂರಿನ ಉದಯರವಿ ಮನೆಯಲ್ಲಿ ಕುವೆಂಪು ಅವರು ಸರಸ್ವತಿ ವಿಗ್ರಹಕ್ಕೆ ನಾಗಮಂಗಲದ ಮಹಾಜನತೆ ಕೊಟ್ಟ ಪ್ರಶಸ್ತಿ ಎಂದು ಉಲ್ಲೇಖಿಸಿರುವ ಬಗ್ಗೆ ಸ್ಮರಿಸಿದರು.

ನಮ್ಮ ಕುವೆಂಪು ಕೃತಿಯ ಲೇಖಕ ನಾಡೋಜ ಜಿ.ಕೃಷ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಊರ್ಧ್ವ ಚಿಂತನೆ ಬಿತ್ತಬೇಕಿದೆ. ಜೀವನವನ್ನು ತಿಳಿಯಲು ಕುವೆಂಪು ಅವರನ್ನು ಓದಬೇಕು. ನಿರಂತರ ಪುಸ್ತಕಗಳ ಓದುಗರಾಗಬೇಕು. ಕುವೆಂಪು ಅವರಂತೆ ಬೃಹತ್ ಗ್ರಂಥ ಬರೆದ ಮಹಾನ್ ಲೇಖಕ ಭಾರತದಲ್ಲಿಯೇ ಇಲ್ಲ. ಕನ್ನಡ ಭಾಷೆಯ ಸೊಬಗನ್ನು ನಿಮ್ಮ ಮುಂದಿನ ಪೀಳಿಗೆಗೆ ರವಾನಿಸುವ ಗುರುತರ ಜವಾಬ್ದಾರಿ ಇಂದಿನ ಯುವ ಪೀಳಿಗೆಯ ಮೇಲಿದೆ ಎಂದರು.

ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ವಿದ್ಯಾರ್ಥಿಗಳು ಕಣಜಗಳಾಗದೆ, ಭತ್ತದ ಗದ್ದೆಗಳಾಗಬೇಕು. ಪುಸ್ತಕದ ಜ್ಞಾನದ ಜತೆಗೆ ಲೋಕ ಜ್ಞಾನ ಮುಖ್ಯ. ಅದಾದಾಗ ಮಾತ್ರ ಬದುಕು ಸಹನೀಯ. ಪುಸ್ತಕಗಳು ನಮ್ಮನ್ನು ಮನುಷ್ಯರನ್ನಾಗಿ ರೂಪಿಸುತ್ತವೆ. ಕುವೆಂಪು ಕವಿ, ಲೇಖಕ, ಟೀಕಾಕಾರ ಸಾಹಿತಿ ಆಗಿದ್ದಾರೆ. ಓದಿನ ಕೊರತೆ ನಮ್ಮನ್ನು ಸ್ವಾರ್ಥದ ಹಾದಿಗೆ ನಿಲ್ಲಿಸಿದೆ. ಮನಸ್ಸು ಶುದ್ಧವಾಗಬೇಕಾದರೆ ಸಾಹಿತ್ಯ ಓದುವ ಮನಸ್ಥಿತಿ ಬೆಳೆಸಿಕೊಳ್ಳಬೇಕು. ಹೃದಯವನ್ನು ತಲುಪುವ ಸಾಹಿತ್ಯ ದೀರ್ಘ ಕಾಲ ಉಳಿಯುತ್ತದೆ. ನಮ್ಮ ಕುವೆಂಪು ಕೃತಿ ಉತ್ತಮವಾಗಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ, ನಾಗಮಂಗಲ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ನಾ.ಸು.ನಾಗೇಶ್, ಕನ್ನಡ ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ.ರಾಮೇಗೌಡ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಸಿ.ಆರ್.ಚಂದ್ರಶೇಖರ್, ಬೆಂಗಳೂರಿನ ಕನ್ನಡ ಜನಶಕ್ತಿ ಕೇಂದ್ರದ ಪ್ರಧಾನ ಸಂಚಾಲಕ ದಯಾನಂದಕಟ್ಟೆ ಸೇರಿದಂತೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net