

ದೇವದುರ್ಗ: ಶಿವಮೊಗ್ಗ ಹಾಗೂ ಬೀದರನಲ್ಲಿ ಸಿಇಟಿ ಪರೀಕ್ಷೆ ಬರೆಯಲು ಬಂದಂತಹ ಬ್ರಾಹ್ಮಣ ಸಮುದಾಯದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆ ಖಂಡಿಸಿ ಪಟ್ಟಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ, ಸೋಮವಂಶ, ಆರ್ಯವಂಶ ಕ್ಷತ್ರಿಯ ಸಮಾಜ ಮುಖಂಡರು ಮಂಗಳವಾರ ಮೌನ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕೆ.ಆರ್.ಪೇಟೆಯಲ್ಲಿ ಬ್ರಾಹ್ಮಣ ಸಮುದಾಯ ಆಕ್ರೋಶ
ಪರೀಕ್ಷೆ ಅಕ್ರಮ ತಡೆಗೆ ಸರ್ಕಾರ ಹಾಗೂ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವ ಬದಲಾಗಿ ಇನ್ನೊಬ್ಬರ ಧಾರ್ಮಿಕ ಭಾವನೆ ಹಾಗೂ ಆಚರಣೆಗೆ ಅಡ್ಡಿ ಮಾಡಿರುವುದು ತೀವ್ರ ಖಂಡನೀಯ. ಶಿವಮೊಗ್ಗ ಹಾಗೂ ಬೀದರ ಪರೀಕ್ಷೆ ಕೇಂದ್ರದಲ್ಲಿ ಅಧಿಕಾರಿಗಳು ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಜನಿವಾರ ತೆಗೆಸಿದ್ದಾರೆ.
ಜನಿವಾರ ಧರಿಸುವುದು ಹಿಂದು ಧರ್ಮದ ಹಲವು ಸಮಾಜಗಳ ಸಂಪ್ರದಾಯವಾಗಿದೆ. ಅಲ್ಲದೆ ಹಲವರ ಧಾರ್ಮಿಕ ಆಚರಣೆಯಾಗಿದೆ. ಪರೀಕ್ಷೆ ಬರೆಯಲು ಜನಿವಾರ ಯಾವುದೇ ಅಡ್ಡಿ ಮಾಡುವುದಿಲ್ಲ. ಆದರೆ ಅಧಿಕಾರಿಗಳು ಅತಿರೇಕದ ವರ್ತನೆ ಮಾಡಿ ವಿದ್ಯಾರ್ಥಿಗಳ ಜನಿವಾರ ತೆಗಿಸಿದ್ದಾರೆ. ಧಾರ್ಮಿಕ ಹಕ್ಕಿಗೆ ಧಕ್ಕೆ ತಂದು ಜನಿವಾರ ತೆಗೆಸಿದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಮುಂದೆ ಇಂಥ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ಶಾಮರಾವ್ ಹೇಮನೂರು, ಗುರುಚಾರ್ಯ ಕೊಪ್ಪರ, ಶ್ರೀನಿವಾಸ್‌ರಾವ್ ವಕೀಲ, ನರಸಿಂಹ ರಾವ್ ಸರ್ಕಿಲ್, ಶ್ರೀಧರ್ ದೇಸಾಯಿ, ತಿರುಪತಿ ಜೋಶಿ, ಕೇದಾರ್ ದೊಟಿಯಾಳ, ಸಚಿನ್ ದೊಟಿಯಾಳ್, ತಿರುಮಲೇಶ್ ಜೋಶಿ, ಮಲ್ಲರಾವ್ ಕುಲಕರ್ಣಿ, ರಾಜೇಶ್ ಗಬ್ಬೂರು, ರಾಘವೇಂದ್ರ ದೊಂಡಂಬಳಿ, ಅನಿಲ್ ಜೋಶಿ, ವೆಂಕಟೇಶ್ ಜೋಶಿ, ಮಾಧವರಾವ್ ಉಭಾಳೆ, ಶಿವಾನಂದ, ಶಿವಾಜಿ ರಾವ್, ಚಂದ್ರಕಾಂತ್, ನಾಗರಾಜ್, ಸತ್ಯನಾರಾಯಣ, ರಘು ಹಂಚಾಟಿ, ವೆಂಕಟೇಶ್, ಪ್ರದೀಪ್ ಹಂಚಾಟಿ ಇದ್ದರು.