

ಸೋಮವಾರಪೇಟೆ: ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಶಾಲಾ ಮಕ್ಕಳ ಆರೋಗ್ಯ ಮತ್ತು ಯೋಗಕ್ಷೇಮ ಕಾರ್ಯಕ್ರಮ ತಾಲೂಕಿನ ಆಯ್ದ 5 ಶಾಲೆಗಳಲ್ಲಿ ಪ್ರಾರಂಭವಾಗಲಿದ್ದು, ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ನಾವು ಪ್ರತಿಷ್ಠಾನದ ಪದಾಧಿಕಾರಿಗಳು ಚರ್ಚಿಸಿದರು.
ಆಯುಷ್ಮಾನ್ ಭಾರತ್ ಕಾರ್ಯಕ್ರಮದ ಭಾಗವಾಗಿದ್ದು, ವಿದ್ಯಾರ್ಥಿಗಳಿಗೆ ಉತ್ತಮ ಜೀವನ ಶೈಲಿ, ಆರೋಗ್ಯಕರ ನಡವಳಿಕೆ ಸೇರಿದಂತೆ 11 ವಿಭಿನ್ನ ವಿಷಯದ ಬಗ್ಗೆ ಮಾಹಿತಿ ನೀಡುವುದಾಗಿದೆ. ಕರ್ನಾಟಕ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಮತ್ತು ಯುನಿಸೆಫ್ ಜಂಟಿಯಾಗಿ ತಮ್ಮ ಜಿಲ್ಲಾ ಪ್ರತಿನಿಧಿಗಳ ಮೂಲಕ ಈ ವಿಚಾರಗಳನ್ನು ವಿದ್ಯಾರ್ಥಿಗಳಿಗೆ ತಲುಪಿಸುವ ಪ್ರಯತ್ನ ನಡೆಸುತ್ತಿದೆ ಎಂದು ನಾವು ಪ್ರತಿಷ್ಠಾನದ ಕಾರ್ಯಕಾರಿ ನಿರ್ದೇಶಕಿ ಸುಮನಾ ಮ್ಯಾಥ್ಯು ಅವರು ಬಿಇಒ ಕೃಷ್ಣಪ್ಪಗೆ ತಿಳಿಸಿದರು.
ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದ ಬಿಇಒ, ಸೂಕ್ತ ಶಾಲೆಗಳನ್ನು ಆಯ್ಕೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು. ನಾವು ಪ್ರತಿಷ್ಠಾನದ ಸಂಸ್ಥಾಪಕ ಗೌತಮ್ ಕಿರಗಂದೂರು, ಸಂಸ್ಥೆ ಪ್ರತಿನಿಧಿಗಳಾದ ಸಹನಾ, ವಿನುತಾ, ಜಯಪ್ರಕಾಶ್, ಸುಬಾನ್ ಇದ್ದರು.