

ಬೆಂಗಳೂರು: ರಕ್ಷಾಬಂಧನ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳು ಮರಗಳಿಗೆ ರಾಖಿ ಕಟ್ಟಿ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಂಡು ಗಮನ ಸೆಳೆದರು.
ವಿದ್ಯಾರ್ಥಿಗಳು ಸ್ವತ: ತಯಾರಿಸಿದ ಬಣ್ಣದ ರಾಖಿಗಳನ್ನು ಸಾಂಕೇತಿವಾಗಿ ತಮ್ಮ ಶಾಲೆಯ ಸುತ್ತಲಿನ ಮರಗಳಿಗೆ ಕಟ್ಟಿದರು. ಈ ವೇಳೆ ‘ಮರ ಉಳಿಸಿ, ಬೆಂಗಳೂರು ಉಳಿಸಿ’ ಅಭಿಯಾನದ ಅಂಗವಾಗಿ ಮರಗಳನ್ನು ಅಪ್ಪಿಕೊಂಡು ಪರಿಸರ ಕಾಪಾಡಲು ಸಂಕಲ್ಪ ಕೈಗೊಂಡರು.
ವರ್ತೂರಿನ ಮುತ್ತಾಸಂದ್ರದ ದಿ ಗ್ರೀನ್ ಸ್ಕೂಲ್ ವಿದ್ಯಾರ್ಥಿಗಳು ಸೋಮವಾರ ರಕ್ಷಾ ಬಂಧನದ ಪ್ರಯುಕ್ತ ಪುನರ್ಬಕೆಯ ಕಾಗದ ಮತ್ತು ತ್ಯಾಜ್ಯದಿಂದ ರಾಖಿಗಳನ್ನು ರಚಿಸಿದರು. ಪಿಸ್ತಾ ಹೊಟ್ಟು, ಪೆನ್ಸಿಲ್ ತುರಿಕೆ, ಹಳೆಯ ಬಟ್ಟೆ ಮತ್ತು ಜೋಳದ ತೊಳೆಗಳನ್ನು ಬಳಸಿ ರಾಖಿ ತಯಾರಿಸಿದರು. ವಿದ್ಯಾರ್ಥಿಗಳ ಕಾರ್ಯಕ್ಕೆ ಶಾಲೆಯ ಬೋಧಕ ವೃಂದ ನೆರವಾದರು.
ಶಾಲಾ ಆವರಣ ಸೇರಿ ಸುತ್ತಲಿನ ಪ್ರದೇಶದ 100ಕ್ಕೂ ಹೆಚ್ಚು ಮರಗಳಿಗೆ ವಿದ್ಯಾರ್ಥಿಗಳು ರಾಖಿ ಕಟ್ಟಿದರು. ನಂತರ ಮುತ್ತಾಸಂದ್ರ ಸರ್ಕಾರಿ ಆಸ್ಪತ್ರೆ ಮತ್ತು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿ ಅಲ್ಲಿನ ಸಿಬ್ಬಂದಿಗಳಿಗೆ ರಾಖಿ ಕಟ್ಟಿ ಸಂಭ್ರಮಿಸಿದರು.