

ಹುಬ್ಬಳ್ಳಿ : ವಿದ್ಯಾರ್ಥಿಗಳಲ್ಲಿ ಅಸಹಾಯಕ, ಅಸುರಕ್ಷತಾ ಭಾವ ಇರಬಾರದು. ತಾನು ಶ್ರೇಷ್ಠ, ಇನ್ನಿತರರು ಕನಿಷ್ಟ ಎಂಬ ಮೇಲರಿಮೆ ಅಥವಾ ಕೀಳರಿಮೆ ಸಲ್ಲದು. ಸಮಚಿತ್ತದ ಸಮಭಾವದಿಂದ ಹೃದಯ ವೈಶಾಲ್ಯತೆ ಬೆಳೆಸಿಕೊಂಡಲ್ಲಿ ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಬೆಂಗಳೂರಿನ ಸುಪ್ರಸಿದ್ಧ ಎಕ್ಸೆಂಚರ್ ಎಚ್.ಆರ್. ಮುಖ್ಯ ವ್ಯವಸ್ಥಾಪಕಿ ಕ್ಯಾಂಡಿಡಾ ಆಂಡ್ರಾಡೆ ಹೇಳಿದರು.
ಇಲ್ಲಿನ ಭೈರೀದೇವರಕೊಪ್ಪ ಹತ್ತಿರದ ಗ್ಲೋಬಲ್ ಬ್ಯುಜಿನೆಸ್ ಕಾಲೇಜ್ ವತಿಯಿಂದ ಗುರುವಾರ ಆಯೋಜಿಸಿದ್ದ ರಾಷ್ಟ್ರ ಮಟ್ಟದ ಎಚ್.ಆರ್. ಫೆಸ್ಟ್ ಪ್ರಯಾಸ್ 2023 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯಾವುದೇ ಸಂಸ್ಥೆಯ ಸಮಗ್ರ, ಸರ್ವಾಂಗೀಣ ಬೆಳವಣಿಗೆಗೆ ಮಾನವ ಸಂಪನ್ಮೂಲ ವ್ಯಕ್ತಿಯ ಪಾತ್ರ ಮಹತ್ವದ್ದು. ಉತ್ತಮ ಹವ್ಯಾಸ, ಕಲಿಕಾಸಕ್ತಿಯ ಜತೆಗೆ ವಿವಿಧ ಹಂತದ ಸ್ಪರ್ಧೆಗಳಲ್ಲಿ ಪಾಲ್ಗೊಂಡು, ಜ್ಞಾನದ ಹರಿವು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಬಿಎಸ್ ಕಾಲೇಜ್ ನಿರ್ದೇಶಕ ಡಾ. ಪ್ರಸಾದ ರೂಡಗಿ ಮಾತನಾಡಿ, ಉದ್ಯೋಗಿಗಳೇ ಸಂಸ್ಥೆಗಳಿಗೆ ಮೂಲ ಬಂಡವಾಳ ಎಂಬುದನ್ನು ಮರೆಯಬಾರದು ಎಂದು ಹೇಳಿದರು.
ರಾಜ್ಯಾದ್ಯಂತ ಸುಮಾರು 24 ಕಾಲೇಜುಗಳ ತಂಡಗಳು ಸೇರಿ ಒಟ್ಟು 160 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಗ್ರಾಮ ವಿಕಾಸ ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಗಿರೀಶ ಮತ್ತಿಕೊಪ್ಪ ಉಪಸ್ಥಿತರಿದ್ದರು. ಕಾಲೇಜಿನ ಡಾ. ತೇಜಸ್ವಿನಿ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.