

ಸೋಮವಾರಪೇಟೆ: ಯುವಕನೊಬ್ಬ ಬೈಕ್‌ನಲ್ಲಿ ಬಂದು ಪ್ರತಿನಿತ್ಯ ಕಿರುಕುಳ ನೀಡುತ್ತಿದ್ದಾನೆ. ನನಗೆ ರಕ್ಷಣೆ ಬೇಕು ಎಂದು ಪಿಯುಸಿ ವಿದ್ಯಾರ್ಥಿನಿ ಮಕ್ಕಳ ಗ್ರಾಮಸಭೆಯಲ್ಲಿ ಮನವಿ ಮಾಡಿದರು.
ಐಗೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ವಿದ್ಯಾರ್ಥಿನಿ ಸಹನಾ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜಿಸಿದ್ದ ಐಗೂರು ಗ್ರಾಮ ಪಂಚಾಯಿತಿ ಮಕ್ಕಳ ಗ್ರಾಮಸಭೆಯಲ್ಲಿ ವಿದ್ಯಾರ್ಥಿನಿ ತನ್ನ ಅಸಹಾಯಕತೆ ವ್ಯಕ್ತಪಡಿಸಿದರು.
ಸಂಜೆ ತರಗತಿ ಮುಗಿದ ನಂತರ ಬಸ್‌ನಲ್ಲಿ ತೆರಳುವ ಸಲುವಾಗಿ ತಂಗುದಾಣದಲ್ಲಿ ನಿಂತಿರುವಾಗ ಬೈಕ್‌ನಲ್ಲಿ ಬರುವ ಯುವಕ ಕೆಟ್ಟದಾಗಿ ಕೈ ಸನ್ನೆ ಮಾಡುತ್ತಾನೆ. ಮೊನ್ನೆ ನನ್ನ ಹೆಸರು ಕೇಳಿದ, ನನಗೆ ಶಾಲೆಗೆ ಬರಲು ಭಯವಾಗುತ್ತಿದೆ ಎಂದು ವಿದ್ಯಾರ್ಥಿನಿ ಹೇಳಿದರು.
ವಿದ್ಯಾರ್ಥಿನಿಗೆ ಧೈರ್ಯ ತುಂಬಿದ ಚಿಲ್ಡ್ರನ್ಸ್ ಮೂವ್‌ಮೆಂಟ್ ಫಾರ್ ಸಿವಿಕ್ ಅವೇರ್‌ನೆಸ್(ಸಿಎಂಸಿಎ) ಸಂಸ್ಥೆಯ ಅಸೋಸಿಯೇಟ್ ಡೈರೆಕ್ಟರ್ ಎಂ.ಪಿ.ಮರುಳಪ್ಪ ಅವರು, ನಿನಗೆ ಎಲ್ಲ ಭದ್ರತೆ ಒದಗಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಶಿಕ್ಷಕಿಯರು ವಿದ್ಯಾರ್ಥಿನಿಗೆ ಧೈರ್ಯ ಹೇಳಿ, ಪೂರ್ಣ ಮಾಹಿತಿ ಸಂಗ್ರಹಿಸಿ ಕೊಡಬೇಕು ಎಂದು ಪಿಡಿಒ ಪೂರ್ಣಕುಮಾರ್ ಹೇಳಿದರು.
ರಾತ್ರಿ ಸಮಯದಲ್ಲಿ ಕಾಲೇಜು ಆವರಣದಲ್ಲಿ ಮದ್ಯದ ಬಾಟಲಿಗಳನ್ನು ಒಡೆದಿರುತ್ತಾರೆ. ಶೌಚಗೃಹದ ಬಾಗಿಲು ಒಡೆದು ಹಾಕಿದ್ದಾರೆ. ಕಾಲೇಜು ಮತ್ತು ಪ್ರೌಢಶಾಲಾ ವಿಭಾಗದಲ್ಲಿ 55 ಬಾಲಕಿಯರು ಇದ್ದೇವೆ. ಶೌಚಗೃಹದ ಸಮಸ್ಯೆಯಿದೆ. ಕಟ್ಟಿಸಿಕೊಡಿ. ಕಾಲೇಜು ಸುತ್ತಲೂ ಭದ್ರತಾ ಬೇಲಿಯ ಅವಶ್ಯಕತೆ ಇದೆ ಎಂದು ವಿದ್ಯಾರ್ಥಿಗಳಾದ ರೊಸ್ನಿ, ಸಹನಾ ಮತ್ತಿತರ ವಿದ್ಯಾರ್ಥಿನಿಯರು ಮನವಿ ಮಾಡಿದರು.
ಶಾಲೆಗೆ ಹೋಗಲು ಕಾಡಾನೆಗಳ ಭಯ: ಯಡವಾರೆ ಸುತ್ತಮುತ್ತಲಿನ ಕಾರ್ಮಿಕರ ಮಕ್ಕಳು 14 ಕಿ.ಮೀ. ನಡೆದುಕೊಂಡು ಬರಬೇಕು. ಮೀಸಲು ಅರಣ್ಯದಲ್ಲಿ ಕಾಲ್ನಡಿಗೆಯಲ್ಲಿ ಬರಲು ಕಾಡಾನೆಗಳ ಭಯವೂ ಇದೆ. ಮಳೆಗಾಲದಲ್ಲಿ ಬಟ್ಟೆ ಒದ್ದೆಯಾಗುತ್ತದೆ. ವಾಹನದ ವ್ಯವಸ್ಥೆ ಮಾಡಿಕೊಡಿ ಎಂದು ಕಾಜೂರು ಸರ್ಕಾರಿ ಶಾಲೆಯ ರೋಶಿನಿ, ಹರ್ಷಿಕಾ, ವೇಣುಗೋಪಾಲ್ ಬೇಡಿಕೆಯಿಟ್ಟರು.
ಕಾಜೂರು ಸರ್ಕಾರಿ ಶಾಲೆಯಲ್ಲಿ 63 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಮುರುಕಲು ಡೆಸ್ಕ್, ಬೆಂಚ್‌ನಲ್ಲಿ ಕೂರುವಂತ ಪರಿಸ್ಥಿತಿ ಇದೆ ಎಂದು ದೀಪ್ತಿ ಅಸಹಾಯಕತೆ ವ್ಯಕ್ತಪಡಿಸಿದರು. ಬಿಡಾಡಿ ದನಗಳ ಕಾಟವಿದೆ, ಯಡವಾರೆ ಶಾಲೆಗೆ ಕಾಂಪೌಂಡ್ ನಿರ್ಮಿಸಿಕೊಡಬೇಕು ಎಂದು ನಂದಿನಿ ಕೇಳಿಕೊಂಡರು.
ಸಭೆಯಲ್ಲಿ ಉಪಾಧ್ಯಕ್ಷೆ ಗೌರಮ್ಮ, ಸದಸ್ಯರಾದ ಜುನೈದ್, ಬೇಬಿ, ಜಾನಕಿ, ಸಿಆರ್‌ಪಿ ಗಿರೀಶ್ ಇದ್ದರು.