ಉತ್ತಮ ಅಂಕ ಗಳಿಸಲು ವಿದ್ಯಾರ್ಥಿಮಿತ್ರ ಸಹಕಾರಿ

UPBR VIDYARTHI MITRA
Published on

ಉಪ್ಪಿನಬೆಟಗೇರಿ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವಾರ್ಷಿಕ ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಪಡೆಯಲು ವಿಜಯವಾಣಿ ವಿದ್ಯಾರ್ಥಿ- ಉದ್ಯೋಗ ಮಿತ್ರ ಸಹಕಾರಿಯಾಗಿದೆ ಎಂದು ಗ್ರಾಪಂ ಅಧ್ಯಕ್ಷ ಬಸೀರ್ ಅಹ್ಮದ್ ಮಾಳಗಿಮನಿ ಅಭಿಪ್ರಾಯಪಟ್ಟರು.

ಗ್ರಾಮದ ಎಂ.ಜಿ. ಹಳವೂರ ಉರ್ದು ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷದ ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ಪತ್ರಿಕೆ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಕ್ಕಳು ಪ್ರತಿದಿನ ಪತ್ರಿಕೆ ಓದುವುದರಿಂದ ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಿ ಉತ್ತಮ ಅಂಕ ಪಡೆದು ಕಲಿತ ಶಾಲೆ, ಕಲಿಸಿದ ಶಿಕ್ಷಕರು ಹಾಗೂ ಗ್ರಾಮಕ್ಕೆ ಒಳ್ಳೆಯ ಹೆಸರು ತರಬಹುದು ಎಂದರು.

ಪ್ರಾಂಶುಪಾಲ ವೈ.ಎಚ್. ಜೋರಮ್ಮನವರ ಮಾತನಾಡಿ, ನಮ್ಮೂರಿನ ಶಾಲಾ ಮಕ್ಕಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ಪತ್ರಿಕೆ ವಿತರಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಮಕ್ಕಳೆಲ್ಲರೂ ಪರೀಕ್ಷೆಯಲ್ಲಿ ನೂರಕ್ಕೆ ನೂರರಷ್ಟು ಫಲಿತಾಂಶ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಬ್ದುಲ್ ಅಜಿಂ ಕರಡಿಗುಡ್ಡ ಮಾತನಾಡಿ, ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರ ಪತ್ರಿಕೆಯಲ್ಲಿ ಬರುವ ಮಾದರಿ ಪ್ರಶ್ನೋತ್ತರಗಳನ್ನು ಗಮನವಿಟ್ಟು ಓದಿಕೊಳ್ಳಬೇಕು. ಇದರಿಂದ ಪರೀಕ್ಷೆ ಎದುರಿಸಲು ಸಹಾಯಕವಾಗಲಿದೆ ಎಂದರು.

ಶಿಕ್ಷಕರಾದ ಎ.ಎ. ಕಿಲ್ಲೇದಾರ, ಎಂ.ಎಂ. ಕೊಹಲಿ, ಎಂ.ಎ. ಅಥಣಿ ಮಾತನಾಡಿದರು. ವಿದ್ಯಾರ್ಥಿಗಳಾದ ಅರ್ಬಾಜ್ ಸುತಗಟ್ಟಿ, ತನ್ಹಾಜ್ ವಕ್ಕುಂದ, ಮುಬಿನ್ ಹಳದಿ, ಆಯೇಶಾ ನದಾಫ್ ವಿಜಯವಾಣಿ ವಿದ್ಯಾರ್ಥಿ-ಉದ್ಯೋಗ ಮಿತ್ರದಲ್ಲಿ ಬರುವ ಪ್ರಶ್ನೋತ್ತರಗಳ ಕುರಿತು ಅನಿಸಿಕೆ ವ್ಯಕ್ತಪಡಿಸಿದರು.

ಗ್ರಂಥಪಾಲಕ ಶ್ರೀಧರ ದೊಡಮನಿ, ಫಕೀರಪ್ಪ ಶಿವಳ್ಳಿ, ಶಿಕ್ಷಕರಾದ ಆಸ್ಮಾ ಫಿರಜಾದೆ, ನಾಜಿಮಾ ಅತ್ತಾರ, ರಿಹಾನಾ ಕೋಳೂರ, ಆರ್.ಎ. ಸನದಿ, ಇತರರು ಉಪಸ್ಥಿತರಿದ್ದರು. ಮಿನಾಜ್ ಉಣಕಲ್ ಹಾಗೂ ಐ.ಎಂ. ಛಡಿದಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net