

ಟಿ.ಎನ್.ಜಗದೀಶ್, ಚನ್ನಗಿರಿ
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಸಲುವಾಗಿ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಚನ್ನಗಿರಿ ತಾಲೂಕಿನ ಬುಸ್ಸೇನಹಳ್ಳಿ ಗ್ರಾಮದ ಬಳಿ ಬಹುಮಹಡಿ ಕಟ್ಟಡದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಆರಂಭಿಸಲಾಗಿದೆ. ವರ್ಷಗಳು ಉರುಳಿದರೂ ವಿದ್ಯಾರ್ಥಿಗಳ ದಾಖಲಾತಿ ಕಾಣದೇ ಖಾಲಿ ಹೊಡೆಯುತ್ತಿದೆ.
ಮಾಜಿ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ತಮ್ಮ ಅಧಿಕಾರಾವಧಿಯಲ್ಲಿ ಸರ್ಕಾರದಿಂದ ಭೂಮಿ ಮಂಜೂರು ಮಾಡಿಸಿದ್ದರು. ಪಾಲಿಟೆಕ್ನಿಕ್ ಕಾಲೇಜಿನ ಜತೆಗೆ ಮಹಿಳಾ ವಿದ್ಯಾರ್ಥಿ ನಿಲಯಕ್ಕೂ ಅನುದಾನ ನೀಡಿದ್ದರಿಂದ 2010 ರಲ್ಲಿ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಕಟ್ಟಡದ ಕೆಲಸ ನಿಂತಿತ್ತು.
2013ರಲ್ಲಿ ಶಾಸಕರಾಗಿದ್ದ ವಡ್ನಾಳ್ ರಾಜಣ್ಣ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳ ಸಭೆ ನಡೆಸಿ, ಕೆಲಸ ನಡೆಸುವಂತೆ ಸೂಚಿಸಿದರು. ಕಾಮಗಾರಿ ಮುಕ್ತಾಯವಾದರೂ ಕಟ್ಟಡ ಉದ್ಘಾಟನೆ ಭಾಗ್ಯ ದೊರಕಿರಲಿಲ್ಲ.
2022ರಲ್ಲಿ ಮಾಡಾಳು ವಿರೂಪಾಕ್ಷಪ್ಪ 2 ನೇ ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ಕಟ್ಟಡವನ್ನು ಉದ್ಘಾಟಿಸಲಾಯಿತು. ಡಿಪ್ಲೋಮಾ ಕಾಲೇಜು ಆರಂಭವಾಗಿ ಸ್ಥಳೀಯ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಶಿಕ್ಷಣಕ್ಕೆ ನೆರವಾಗಲಿದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅದ್ಯಾವುದೂ ಆಗಲಿಲ್ಲ.
ಕಟ್ಟಡ ಕಾಮಗಾರಿ ಮೊಟಕು: ವಿದ್ಯಾರ್ಥಿನಿಯರ ವಸತಿ ನಿಲಯದ ಕಾಮಗಾರಿ ಕೆಲಸ ಮೊಟಕುಗೊಂಡು ವರ್ಷಗಳೇ ಉರುಳಿದರೂ, ಕೆಲಸ ಪುನರಾರಂಭವಾಗಿಲ್ಲ. ಈ ಕಟ್ಟಡಕ್ಕೆ 2.81 ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೂ ಕಟ್ಟಡ ಕಾಮಗಾರಿ ಪೂರ್ಣವಾಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪಾಲಿಟೆಕ್ನಿಕ್ ಕಾಲೇಜು ಪ್ರಾರಂಭದ ದಿನದಲ್ಲಿ ಮಕ್ಕಳಿಗೆ ಅನುಕೂಲವಾಗಲೆಂದು ಎಲೆಕ್ಟ್ರಿಕಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಆಂಡ್ ಕಮ್ಯುನಿಕೇಷನ್ ಹಾಗೂ ಸಿವಿಲ್ ಕೋರ್ಸ್ಗಳು ಮಂಜೂರಾಗಿದ್ದವು. ಇದರಲ್ಲಿ ಯಾವುದನ್ನೂ ನೀಡದೆ, ಪರ್ಯಾಯವಾಗಿ ಇಂಜಿನಿಯರಿಂಗ್ ಟೆಕ್ನಾಲಜಿ ಮತ್ತು ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸ್ಗಳು ಆರಂಭವಾಗಿದ್ದರಿಂದ ಯಾವ ವಿದ್ಯಾರ್ಥಿಯೂ ದಾಖಲಾತಿ ಪಡೆಯಲಿಲ್ಲ. ವಿದ್ಯಾರ್ಥಿಗಳಿಲ್ಲದೆ ಕಾಲೇಜು ಕೊಠಡಿಗಳಿಗೆ ಬೀಗ ಹಾಕಲಾಗಿದೆ.
ಸದ್ಯ ಇಂಜಿನಿಯರಿಂಗ್ ತಂತ್ರಜ್ಞಾನ ಕೋರ್ಸ್ಗೆ 25, ಆಟೋಮೊಬೈಲ್ ಇಂಜಿನಿಯರಿಂಗ್ಗೆ 23 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಇವರು ಉತ್ತೀರ್ಣರಾಗಿ ಹೋದರೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಲ್ಲದೆ ಖಾಲಿಯಾಗಲಿದೆ.
ಕಾಲೇಜಿಗಿಲ್ಲ ಪ್ರಾಚಾರ್ಯರು: ಕಾಲೇಜಿನಲ್ಲಿ ಪ್ರಾಚಾರ್ಯರೇ ಇಲ್ಲ. ಉಪನ್ಯಾಸಕರಿಗೆ ಪ್ರಾಚಾರ್ಯರ ಹುದ್ದೆ ಜವಾಬ್ದಾರಿ ನೀಡಲಾಗಿದೆ. 6 ಕಾಯಂ ಉಪನ್ಯಾಸಕರು, ಐವರು ಪೂರ್ಣಾವಧಿ ಅತಿಥಿ ಉಪನ್ಯಾಸಕರು ಹಾಗೂ ಇಬ್ಬರು ಅರೆಕಾಲಿಕ ಉಪನ್ಯಾಸಕರು ಕರ್ತವ್ಯದಲ್ಲಿದ್ದಾರೆ.
ಅಡಕೆ ನಾಡು ಎಂದು ಪ್ರಸಿದ್ಧಿ ಪಡೆದಿರುವ ಚನ್ನಗಿರಿಯ ಜನರು ಆರ್ಥಿಕವಾಗಿ ಉತ್ತಮ ಜೀವನ ಕಟ್ಟಿಕೊಂಡಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಚಿಂತೆ ಮಾಡದೆ, ಉತ್ತಮ ಕಾಲೇಜು ಹುಡುಕಿ ಸೇರಿಸುವ ಸಾಮರ್ಥ್ಯ ಇಲ್ಲಿನ ಪಾಲಕರಲ್ಲಿದೆ. ಹೀಗಾಗಿ ಇಲ್ಲಿನ ವಿದ್ಯಾರ್ಥಿಗಳು ದಾವಣಗೆರೆ, ಶಿವಮೊಗ್ಗ, ಉಡುಪಿ, ಮಂಗಳೂರು ಸೇರಿ ಇತರ ಊರುಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಾರೆ.
ಪಾಲಕರೇ ಹಿಂದೇಟು: ಚನ್ನಗಿರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವಂತಹ ಕೋರ್ಸ್ಗಳು ಇಲ್ಲ ಎನ್ನುವ ಕಾರಣಕ್ಕೆ ಇಲ್ಲಿ ಮಕ್ಕಳನ್ನು ಸೇರಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ನಿರೀಕ್ಷಿತ ವಿದ್ಯಾರ್ಥಿಗಳಿಲ್ಲದೇ ಕಾಲೇಜು ಭಣಗುಡುತ್ತಿದೆ.
ಒಟ್ಟಿನಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಕೋಟಿಗಟ್ಟಲೇ ಹಣ ಖರ್ಚು ಮಾಡಿ ಕಾಲೇಜು ಆರಂಭಿಸಿದ್ದರೂ ವಿದ್ಯಾರ್ಥಿಗಳು ಬಾರದೆ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಪಾಲಕರಿಗೆ ಕೋರ್ಸ್ಗಳ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯದೆ ಇರುವುದರಿಂದ ಮಕ್ಕಳನ್ನು ದಾಖಲಾತಿ ಮಾಡಿಸುತ್ತಿಲ್ಲ. ಕಾಲೇಜಿನ ವತಿಯಿಂದ ಕರಪತ್ರ ಹಂಚಲಾಗಿದ್ದು, ಶಾಲೆಗಳ ಭೇಟಿ ಹಾಗೂ ಪಾಲಕರ ಫೋನ್ ನಂಬರ್ ಪಡೆದು ಕರೆ ಮಾಡಿ ಒಪ್ಪಿಸುವಂತಹ ಕೆಲಸ ನಡೆಯುತ್ತಿದೆ. | ಆರ್.ಡಿ.ವೈಜಯಂತಿ, ಪ್ರಭಾರ ಪ್ರಾಚಾರ್ಯು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡುವ ಸಲುವಾಗಿ ಕಾಲೇಜು ಪ್ರಾರಂಭಿಸಿದೆ. ಆದರೆ ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆಯುವಂಥ ಯಾವ ಕೋರ್ಸ್ಗಳು ಇಲ್ಲದಿರುವ ಕಾರಣ ಪಾಲಕರು ಮಕ್ಕಳನ್ನು ಬೇರೆ ಕಾಲೇಜಿಗೆ ಸೇರಿಸಲು ಮುಂದಾಗಿದ್ದಾರೆ. ನಾಗರಾಜ್ ಬುಳ್ಳಿ, ಪಾಲಕರು, ಚನ್ನಗಿರಿ (ಮಗ್ಶಾಟ್)