ಮತದಾನ ಮಾಡಿದ ವಿದ್ಯಾರ್ಥಿಗಳು

23 ard 01 (3)
Published on

ಔರಾದ್: ಚುನಾವಣೆ ಅರಿವು ಮೂಡಿಸುವುದು, ವಿದ್ಯಾರ್ಥಿ ಸಂಘದ ರಚನೆಗಾಗಿ ಎಕಲಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಇವಿಎಂ ಮಾದರಿ ಚುನಾವಣೆ ನಿಮಿತ್ತ ವಿದ್ಯಾರ್ಥಿಗಳು ಮತದಾನ ಮಾಡಿದರು. ಭಾರತೀಯ ಚುನಾವಣೆ ಆಯೋಗದ ಮಾರ್ಗಸೂಚಿ ಅನ್ವಯ ನಡೆಯಲಿರುವ ಸಾರ್ವಜನಿಕ ಚುನಾವಣೆ ಮಾದರಿಯಲ್ಲಿ ನಡೆದ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಭಾಗವಹಿಸಿದ್ದರು.
ಆಧುನಿಕ ತಂತ್ರಜ್ಞಾನ, ವೈಜ್ಞಾನಿಕ ಉಪಕರಣಗಳನ್ನು ಬಳಸಿ ಮತದಾನ ಪ್ರಕ್ರಿಯೆ ನಡೆಸಲಾಯಿತು. ಶಿಕ್ಷಕ ಬಾಲಾಜಿ ಅಮರವಾಡಿ ಮೊಬೈಲ್ ಆ್ಯಪ್ ಬಳಸಿ ಟ್ಯಾಬ್‌ನಲ್ಲಿ ಮತಯಂತ್ರ ಮತ್ತು ಕಂಟ್ರೋಲ್ ಯೂನಿಟ್‌ಗಳು ವಿನ್ಯಾಸಗೊಳಿಸಿದ್ದು ಗಮನ ಸೆಳೆಯಿತು.
ವಿಧಾನಸಭೆ, ಲೋಕಸಭೆ ಚುನಾವಣೆ ಮಾದರಿಯಲ್ಲಿ ನಾಮಪತ್ರ ಸಲ್ಲಿಕೆ, ಪರಿಶೀಲನೆ, ನಾಮಪತ್ರ ಹಿಂತೆಗೆತ, ಪ್ರಚಾರಕ್ಕೆ ಅವಕಾಶ, ಮತದಾನ ಸೇರಿ ಎಲ್ಲ ಪ್ರಕ್ರಿಯೆ ನಡೆದವು. ಮುಖ್ಯಶಿಕ್ಷಕ ಪ್ರಭು ಬಾಳೂರೆ ಚುನಾವಣಾಧಿಕಾರಿಯಾಗಿ, ಸಮಾಜ ಶಿಕ್ಷಕ ಅಂಕುಶ ಪಾಟೀಲ್ ಸಹಾಯಕ ಚುನಾವಣಾಧಿಕಾರಿಯಾಗಿ, ಸಿಆರ್‌ಪಿ ಮಹಾದೇವ ಘುಳೆ ಸೆಕ್ಟರ್ ಅಧಿಕಾರಿಯಾಗಿ, ಶಿಕ್ಷಕರಾದ ಜೈಸಿಂಗ ಠಾಕೂರ್, ವೀರಶೆಟ್ಟಿ ಗಾದಗೆ, ಬಾಲಾಜಿ ಅಮರವಾಡಿ, ಕಿರಣ ಹಾಗೂ ಸಿದ್ದೇಶ್ವರಿ ಮತ್ತು ರಮೇಶ ಹಿಪ್ಪಳಗಾವೆ ಮತಗಟ್ಟೆ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು.
ಮತಯಂತ್ರದಲ್ಲಿ ಅಭ್ಯರ್ಥಿಗಳ ಫಲಿತಾಂಶ ಅಡಗಿದ್ದು, ಸೋಮವಾರ ಫಲಿತಾಂಶ ಘೋಷಣೆ ಮಾಡಲಾಗುವುದು, ನಂತರ ಪ್ರಮಾಣ ವಚನ ಸ್ವೀಕಾರ ಸೇರಿ ಎಲ್ಲ ಕಾರ್ಯಕ್ರಮ ನೆರವೇರಿಸಲಾಗುವುದು ಎಂದು ಸಹಾಯಕ ಚುನಾವಣಾ ಅಧಿಕಾರಿ ಅಂಕುಶ ಪಾಟೀಲ್ ತಿಳಿಸಿದರು. ಮುಖಂಡರಾದ ಯೂನೂಸ್ ಹಾಗೂ ರಮೇಶ ಪಾಂಚಾಳ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net