

ಪಾಂಡವಪುರ : ತಾಲೂಕಿನ ಚಂದ್ರೆ ಗ್ರಾಮದ ಕೆರೆಗೆ ಈಜಲು ಇಳಿದಿದ್ದ ವಿದ್ಯಾರ್ಥಿಯೊಬ್ಬ ನೀರಿನಲ್ಲಿ ಮುಳುಗಿ ಶನಿವಾರ ಮೃತಪಟ್ಟಿದ್ದಾನೆ.
ಪಟ್ಟಣದ ವಿಜಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಎನ್.ಸಿ.ಗಜೇಂದ್ರ (17) ಮೃತ.
ಕಾಲೇಜು ವತಿಯಿಂದ ಚಂದ್ರೆ ಗ್ರಾಮದಲ್ಲಿ ಆಯೋಜಿಸಿದ್ದ ವಾರ್ಷಿಕ ವಿಶೇಷ ಎನ್‌ಎಸ್‌ಎಸ್ ಶಿಬಿರಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿ ಕೆರೆಗೆ ಈಜಲು ತೆರಳಿದ್ದಾಗ ದುರ್ಘಟನೆ ಜರುಗಿದೆ. ಸಹ ಶಿಬಿರಾರ್ಥಿಗಳಿಂದ ವಿಷಯ ತಿಳಿದ ಗ್ರಾಮಸ್ಥರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ವಿಷಯ ಮುಟ್ಟಿಸಿದರು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಶವವನ್ನು ಹೊರತೆಗೆದರು.
ಮೈಸೂರು ತಾಲೂಕು ಇಲವಾಲ ಹೋಬಳಿಯ ನಾಗವಾಲ ಗ್ರಾಮದ ಚೆಲುವ ಮತ್ತು ಪುಟ್ಟಮ್ಮಣಿ ದಂಪತಿ ಮಗನಾದ ಎನ್.ಸಿ.ಗಜೇಂದ್ರ ಪಾಂಡವಪುರ ಪಟ್ಟಣದಲ್ಲಿ ವಾಸವಿದ್ದುಕೊಂಡು ಕಾಲೇಜಿಗೆ ತೆರಳುತ್ತಿದ್ದ.
ಶಿಬಿರದಲ್ಲಿ ಭಾಗವಹಿಸಲು ಒಪ್ಪಿಗೆ ಪತ್ರ:
ಕಾಲೇಜಿನಿಂದ ತಾಲೂಕಿನ ಚಂದ್ರೆ ಗ್ರಾಮದಲ್ಲಿ ಅ.25 ರಿಂದ ಅ.31 ರವರೆಗೆ ಆಯೋಜಿಸಿದ್ದ ವಾರ್ಷಿಕ ವಿಶೇಷ ಎನ್‌ಎಸ್‌ಎಸ್ ಶಿಬಿರಾರ್ಥಿಯಾಗಿ ಪಾಲ್ಗೊಳ್ಳಲು ಕಾಲೇಜು ಕೇಳಲಾಗಿದ್ದ ಪಾಲಕರ ಒಪ್ಪಿಗೆ ಪತ್ರಕ್ಕೆ ಮೃತ ವಿದ್ಯಾರ್ಥಿ ಸಹಿ ಹಾಕಿಸಿ ಕಾಲೇಜಿಗೆ ನೀಡಿದ್ದಾನೆ. ಇದರಲ್ಲಿ ಶಿಬಿರದ ನಿಯಮಗಳಿಗೆ ಬದ್ಧನಾಗಿರುತ್ತೇನೆ. ನನ್ನಿಂದ ಶಿಸ್ತು ಉಲ್ಲಂಘನೆ ಮತ್ತು ಅಹಿತಕರ ಘಟನೆ ನಡೆದರೆ ಪ್ರಾಂಶುಪಾಲರು ಕೈಗೊಳ್ಳುವ ಕ್ರಮಕ್ಕೆ ಒಪ್ಪಿಕೊಳ್ಳುತ್ತೇನೆ. ಇದಕ್ಕೆ ಪಾಲಕರ ಒಪ್ಪಿಗೆ ಕೂಡ ಇದೆ. ಸ್ವ ಇಚ್ಛೆಯಿಂದ ಶಿಬಿರದಲ್ಲಿ ಪಾಲ್ಗೊಳ್ಳುತ್ತಿದ್ದೇನೆ ಎಂದು ಪತ್ರಕ್ಕೆ ರುಜು ಹಾಕಿದ್ದಾನೆ.
ಪಾಂಡವಪುರ ಪಟ್ಟಣದ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಮೃತ ದೇಹ ಇಡಲಾಗಿದೆ. ಈ ಸಂಬಂಧ ದೂರು ದಾಖಲಾಗಿಲ್ಲ.