ವಿದ್ಯುತ್ ತಂತಿ ತಾಗಿ ವಿದ್ಯಾರ್ಥಿನಿ ಸಾವು

HLY current
Published on

ಹಳಿಯಾಳ: ಮೂತ್ರ ವಿಸರ್ಜನೆಗೆ ತೆರಳಿದ ವಿದ್ಯಾರ್ಥಿನಿಯೊಬ್ಬಳು ಶೌಚಗೃಹದಲ್ಲಿ ವಿದ್ಯುತ್ ತಂತಿ ತಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಮುಂಡವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದಿದೆ.

ಎರಡನೇ ತರಗತಿಯ ಸಾನ್ವಿ ಬಸವರಾಜ ಗೌಳಿ (8) ಮೃತಪಟ್ಟ ವಿದ್ಯಾರ್ಥಿನಿ. ಶಾಲೆಯ ಬೋರ್‌ವೆಲ್‌ಗೆ ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿತ್ತು ಎನ್ನಲಾಗಿದೆ. ತುಂಡಾದ ವಿದ್ಯುತ್ ತಂತಿಯನ್ನು ಬದಲಾಯಿಸದೇ ಗಮ್ ಟೆಪ್ ಸುತ್ತಿ ಬಿಡಲಾಗಿತ್ತು. ಅದೇ ವೈರ್ ಗುರುವಾರ ಮತ್ತೆ ತುಂಡಾಗಿ ಶೌಚಗೃಹದಲ್ಲಿ ಬಿದ್ದಿದೆ. ಅದನ್ನು ಗಮನಿಸದ ಮುಗ್ದ ಬಾಲಕಿ ಮೂತ್ರ ವಿಸರ್ಜನೆಗೆ ತೆರಳಿದಾಗ ವಿದ್ಯುತ್ ತಂತಿ ತಗುಲಿ ಪ್ರಾಣ ಪಕ್ಷಿ ಹಾರಿಹೊಗಿದೆ.

ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ವಿದ್ಯುತ್ ಇಲಾಖೆಯ ನಿರ್ಲಕ್ಷ್ಯದಿಂದ ಬಾಲಕಿ ಪ್ರಾಣ ಕಳೆದುಕೊಂಡಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದರು.

ಸ್ಥಳಕ್ಕೆ ತಹಸೀಲ್ದಾರ್ ಪ್ರವೀಣ ಹುಚ್ಚನ್ನವರ, ಸಿಪಿಐ ಜಯವಂತ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.

ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತು ಪ್ರತಿಕ್ರಿಯಿಸಿದ ಡಿಡಿಪಿಐ ಬಸವರಾಜ ಪಾರಿ, ಶಿಕ್ಷಕರು ಮುಂಜಾಗ್ರತೆ ಕ್ರಮ ವಹಿಸಿದ್ದರೆ ಘಟನೆ ತಪ್ಪಿಸಬಹುದಾಗಿತ್ತು. ಶಾಲಾ ಆವರಣದಲ್ಲಿ ಇರುವ ವಿದ್ಯುತ್ ತಂತಿಗಳು ಹಾಗೂ ಕಂಬಗಳ ಸ್ಥಳಾಂತರಕ್ಕೆ ಸೂಚಿಸಿದ್ದೇನೆ ಎಂದರು.

ದುರ್ಘಟನೆಯಿಂದ ಗ್ರಾಮವೆಲ್ಲ ಶೋಕಸಾಗರದಲ್ಲಿ ಮುಳುಗಿದೆ. ಹಳಿಯಾಳ ಸರ್ಕಾರಿ ಆಸ್ಪತ್ರೆಯ ಶವಾಗಾರದ ಎದುರು ಮೃತಳ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ವಿಷಯ ತಿಳಿದು ಶಾಸಕ ಆರ್.ವಿ. ದೇಶಪಾಂಡೆ ಅವರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಮೃತ ಬಾಲಕಿಯ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಶಾಲೆಗಳಲ್ಲಿ ಮಕ್ಕಳ ಬಗ್ಗೆ ಶಿಕ್ಷಕರು ಕಾಳಜಿ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ಶಾಲೆಯಲ್ಲಿನ ಬೋರ್‌ವೆಲ್‌ಗೆ ಪಡೆದ ವಿದ್ಯುತ್ ಸಂಪರ್ಕ ಅನಧಿಕೃತವಾಗಿದೆ. ಈ ಬಗ್ಗೆ ಹೆಸ್ಕಾಂ ಇಲಾಖೆಯ ಜಾಗೃತದಳದಿಂದ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ರವೀಂದ್ರ ಮೆಟಗೆಡ್ಡು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹೆಸ್ಕಾಂ, ಹಳಿಯಾಳ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net