

ರಾಣೆಬೆನ್ನೂರ: ಇಲ್ಲಿಯ ಬಿಸಿಎಂ ಹಾಸ್ಟೇಲ್‌ನಲ್ಲಿ ಮೇಲ್ಮಹಡಿಯಿಂದ ಬಿದ್ದು ಮೃತಪಟ್ಟ ವಿದ್ಯಾರ್ಥಿನಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿ ಇಲ್ಲಿಯ ನ್ಯಾಯಾಲಯದ ಹಿರಿಯ ದೀವಾಣಿ ನ್ಯಾಯಾಧೀಶೆ ವೈ.ಎಲ್. ಲಾಡಖಾನ್ ಆದೇಶ ಹೊರಡಿಸಿದ್ದಾರೆ.
ತಾಲೂಕಿನ ಹನುಮಾಪುರ ಗ್ರಾಮದ ಕಾವ್ಯಾ ಬೆನ್ನೂರ ಎಂಬುವರ ಕುಟುಂಬಕ್ಕೆ ಪರಿಹಾರ ನೀಡಲು ನ್ಯಾಯಾಧೀಶರು ಸೂಚಿಸಿದ್ದಾರೆ.
ಘಟನೆ ಹಿನ್ನೆಲೆ…
2019 ಅಕ್ಟೋಬರ್ 10ರಂದು ಇಲ್ಲಿಯ ಈಶ್ವರ ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೇಲ್‌ನಲ್ಲಿ ಪಿಯುಸಿ ವಿದ್ಯಾರ್ಥಿನಿ ಕಾವ್ಯಾ ಬೆನ್ನೂರ 2ನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಳು. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದು ಮಳೆ ಬಂದಿದ್ದರಿಂದ ಕಾವ್ಯಾ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಳು. ಆದರೆ, ಮಹಡಿಯಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಸ್ಟೇಲ್‌ನವರ ಜವಾಬ್ದಾರಿ ಆಗಿತ್ತು. ಈ ಹಿನ್ನೆಲೆಯಲ್ಲಿ ಮೃತಳ ಕುಟುಂಬದವರು ಪರಿಹಾರಕ್ಕಾಗಿ ನ್ಯಾಯಾಲಯದ ಮೋರೆ ಹೋಗಿದ್ದರು. ಇದು ಸಾಕ್ಷಾೃಧಾರಗಳ ಸಮೇತ ರುಜುವಾತು ಆಗಿದ್ದರಿಂದ ನ್ಯಾಯಾಧೀಶರು ಪರಿಹಾರ ನೀಡುವಂತೆ ಆದೇಶ ಹೊರಡಿಸಿದ್ದಾರೆ. ಮೃತ ಕಾವ್ಯಾಳ ಪರವಾಗಿ ವಕೀಲ ಮೃತ್ಯುಂಜಯ ಗುದಿಗೇರ ವಾದ ಮಂಡಿಸಿದ್ದರು.
ವಕೀಲರಿಗೆ ಸನ್ಮಾನ…
ಪ್ರಕರಣದಲ್ಲಿ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಮೃತ ಕಾವ್ಯಾಳ ಕುಟುಂಬದವರು ವಕೀಲ ಮೃತ್ಯುಂಜಯ ಗುದಿಗೇರ ಅವರನ್ನು ನಗರದ ಪ್ರವಾಸಿ ಮಂದಿರದಲ್ಲಿ ಸನ್ಮಾನಿಸಿದರು. ಕಾವ್ಯಾಳ ತಂದೆ ಅಶೋಕಪ್ಪ ಬೆನ್ನೂರ, ತಾಯಿ ಲಕ್ಷ್ಮವ್ವ ಬೆನ್ನೂರ, ಸಹೋದರಿ ವಿದ್ಯಾ ಬೆನ್ನೂರ, ವಕೀಲ ನಾರಾಯಣ ಕಾಳೆ, ಬಸವರಾಜ ಭೋವಿ, ಚಂದ್ರು ಚಪ್ಪರಮನಿ, ಮಲ್ಲೇಶಪ್ಪ ಮದ್ಲೇರ, ಷಣ್ಮುಖಪ್ಪ ಕಂಬಳಿ ಮತ್ತಿತರರು ಉಪಸ್ಥಿತರಿದ್ದರು.