

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಪ್ರಿಯದರ್ಶಿನಿ ಕಾಲನಿಯ ಡಾ. ಆರ್.ಬಿ. ಪಾಟೀಲ ಮಹೇಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲದಲ್ಲಿ 2023-24ನೇ ಸಾಲಿನ ವಿದ್ಯಾರ್ಥಿ ಪರಿಷತ್ ರಚಿಸಲಾಗಿದೆ.
ವಿದ್ಯಾರ್ಥಿ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾಗಿ ಅಸ್ಮೀರ್ ಅಮ್ಮನಗಿ ಹಾಗೂ ಸಾಯಿ ಶ್ರುತವತಿ ರಾಯಚೂರ ಪ್ರಮಾಣ ವಚನ ಸ್ವೀಕರಿಸಿದರು. ಸುಮಾರು 50 ವಿದ್ಯಾರ್ಥಿಗಳು ಸಾಹಿತ್ಯಿಕ ಕ್ಲಬ್, ಪರಿಸರ ಕ್ಲಬ್, ಕ್ರೀಡಾ ಕ್ಲಬ್, ಸಾಂಸ್ಕೃತಿಕ ಕ್ಲಬ್ ಮತ್ತು ವಿದ್ಯಾರ್ಥಿ ವೇದಿಕೆಗಳ ನಾಯಕರಾಗಿ ಹೊರ ಹೊಮ್ಮಿದರು.
ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್ಎಲ್ಇ ಸಂಸ್ಥೆಯ ಕಾರ್ಯದರ್ಶಿ ರಾಜಾ ದೇಸಾಯಿ, ನಾಯಕತ್ವವು ಕೇವಲ ಅಲಂಕಾರಿಕವಾಗಿರದೇ ಸಂಘಟನಾತ್ಮಕ ವಿಚಾರಗಳನ್ನು ಕಾರ್ಯರೂಪದಲ್ಲಿ ತರುವಂತೆ ಇರಬೇಕು ಎಂದರು.
ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದ ಪ್ರಾಚಾರ್ಯ ರಾಮ ಮೋಹನ ಎಚ್.ಕೆ., ನಾಯಕ್ವತದ ಗುಣಗಳನ್ನು ವಿದ್ಯಾರ್ಥಿ ಜೀವನದಲ್ಲಿ ಬೆಳೆಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಉತ್ತಮ ನಾಯಕನಾಗಲು ಸಾಧ್ಯ. ವಿದ್ಯಾರ್ಥಿ ಪರಿಷತ್ನ ಎಲ್ಲ ವಿದ್ಯಾರ್ಥಿ ನಾಯಕರುಗಳು ರಚನಾತ್ಮಕವಾಗಿ ಮತ್ತು ಗುಣಾತ್ಮಕವಾಗಿ ಕಾರ್ಯ ನಿರ್ವಹಿಸಿ ಯಶಸ್ಸು ಸಾಧಿಸಬೇಕೆಂದು ಸಲಹೆ ನೀಡಿದರು.
ಉಪ ಪ್ರಾಚಾರ್ಯ ರಮೇಶ ಹೊಂಬಾಳಿ ಇದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಐ.ಎಸ್. ಹಿರೇಮಠ ಸ್ವಾಗತಿಸಿದರು. ಉಪನ್ಯಾಸಕ ನೀಲ್ ಪ್ರತಾಪನ್ ನಿರೂಪಿಸಿದರು. ವಿದ್ಯಾರ್ಥಿನಿ ದೀಪಾ ಹೆಗಡೆ ಪ್ರಾರ್ಥನೆ ಹಾಡಿದರು. ಉಪನ್ಯಾಸಕಿ ಆತ್ಮಾ ಸಿಂಧಗಿ ವಂದಿಸಿದರು.