

ಕಿಕ್ಕೇರಿ: ದೇಶದ ಯುವಶಕ್ತಿ ಅರ್ಧದಷ್ಟು ಸಮಸ್ಯೆಗಳನ್ನು ದುಶ್ಚಟಗಳಿಂದ ತಂದುಕೊಳ್ಳುತ್ತಿದ್ದಾರೆ ಎಂದು ಪ್ರಾಂಶುಪಾಲ ಎಸ್. ದೊರೆಸ್ವಾಮಿ ಹೇಳಿದರು. ಪಟ್ಟಣದ ಕೆಪಿಎಸ್ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ ಏರ್ಪಡಿಸಿದ್ದ ವ್ಯಸನಮುಕ್ತ ಭಾರತ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ರಾಷ್ಟ್ರ ಯುವಶಕ್ತಿಯ ಮೇಲೆ ಬಿಂಬಿತವಾಗಿದೆ. ಸುಭದ್ರ ದೇಶ ನಿರ್ಮಾಣದ ಆಸ್ತಿಯಾಗಿರುವ ಯುವಕರನ್ನು ಜೋಪಾನ ಮಾಡುವುದು ಹಿರಿಯರ ಕರ್ತವ್ಯ. ವಿದ್ಯಾರ್ಥಿ ದಿಸೆಯಲ್ಲಿ ಸನ್ನಡತೆ, ಉತ್ತಮ ಹವ್ಯಾಸ ರೂಢಿಸಿಕೊಳ್ಳುವುದು ಮುಖ್ಯ. ಮಾದಕ ವಸ್ತುಗಳ ಸೇವನೆಯಿಂದ ಖಿನ್ನತೆ, ಆರೋಗ್ಯದಲ್ಲಿ ಏರುಪೇರು, ಚಿತ್ತ ಚಂಚಲತೆ, ದುಶ್ಚಟಗಳಿಂದ ಹೊರಬರಲಾಗದೆ ಆತ್ಮಹತ್ಯೆಯಂತಹ ದಾರಿ ಕಂಡುಕೊಳ್ಳುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳಲ್ಲಿ ದುಶ್ಚಟ, ಮಾದಕ ದ್ರವ್ಯಗಳಾದ ಸಿಗರೇಟ್, ಗುಟ್ಕಾ, ತಂಬಾಕು, ಮದ್ಯಸೇವನೆ, ಗಾಂಜಾ, ಅಫೀಮುಗಳಂತಹ ಅಪಾಯಕರ ವಸ್ತುಗಳಿಂದ ದೂರವಿರಲು ಜಾಗ್ರತೆ ಮೂಡಿಸಬೇಕಿದೆ. ಕಾಲೇಜು ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬೇಗ ಬಲಿಯಾಗುತ್ತಿದ್ದಾರೆ. ಮಾದಕದ್ರವ್ಯ ಕ್ಷಣಿಕವಾಗಿ ಮನಸ್ಸು ಉಲ್ಲಾಸದಿಂದ ತೇಲುವಂತೆ ಮಾಡಬಹುದು. ಆರಂಭದಲ್ಲಿ ಬೇಸರ, ಖುಷಿಗೆ ಆರಂಭವಾಗಿ ನಂತರ ಬಿಡಲಾರದ ಚಟವಾಗಲಿದೆ ಎಂದು ಎಚ್ಚರಿಸಿದರು.
ಯುವಕರು ಕ್ರೀಡೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ, ಪುಸ್ತಕ ಓದುವುದು, ಹೊಸ ವಿಷಯಗಳ ಕುರಿತು ಚಿಂತನೆ ಮಾಡುವಂತಹ ಹವ್ಯಾಸವನ್ನು ರೂಢಿಸಿಕೊಂಡು ಸುಭದ್ರ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕಿದೆ. ಶಿಕ್ಷಣ ಎಲ್ಲ ದುರಭ್ಯಾಸಗಳನ್ನು ದೂರ ಮಾಡುವ ಚಿಂತನೆಯನ್ನು ಮೂಡಿಸಲಿದೆ ಎಂದು ತಿಳಿ ಹೇಳಿದರು. ವಿದ್ಯಾರ್ಥಿಗಳು ಉತ್ತಮ ಸಮಾಜ ನಿರ್ಮಿಸಲು, ದುಶ್ಚಟಮುಕ್ತ, ನಶಾಮುಕ್ತ ಸಮಾಜ ನಿರ್ಮಿಸಲು ಜಾಗ್ರತೆ ಮೂಡಿಸುವುದಾಗಿ ಪ್ರತಿಜ್ಞೆ ಮಾಡಿದರು. ಎನ್‌ಎಸ್‌ಎಸ್ ಘಟಕಾಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಜಿ. ರಮೇಶ್, ಎನ್. ರವೀಂದ್ರ, ಎ.ಎಂ. ಮಂಜುನಾಥ್, ಎನ್.ಎ. ನಾಗೇಶ್, ವಿನಾಯಕ, ಚಂದ್ರಿಕಾ, ವರಲಕ್ಷ್ಮೀ, ಫಾಜಿಲಾ ಖಾನಂ ಭಾಗವಹಿಸಿದ್ದರು.