

ಮುದ್ದೇಬಿಹಾಳ: ಪೋಕ್ಸೋ ಅಡಿ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಕಳೆದ ನ. 27 ರಂದು 6 ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದ ಫಿರ್ಯಾದಿ, ಖಾಸಗಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿನಿ ತನ್ನ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮುದ್ದೇಬಿಹಾಳ ತಾಲೂಕಿನ ಪಟ್ಟಣ ಪ್ರದೇಶವೊಂದರಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಕಳೆದ ಸೆ.1 ರಿಂದ ನ. 27ರ ನಡುವಿನ ಅವಧಿಯಲ್ಲಿ ಯುವಕ ಸಂಗಮೇಶ ಜುಂಜವಾರ ಎಂಬಾತ ನಾನು ಹೈಸ್ಕೂಲಿಗೆ ಹೋಗುವಾಗ ಬೆನ್ನು ಹತ್ತಿ ಮಾತನಾಡುವುದು, ಮೈ ಕೈ ಮುಟ್ಟುವುದು, ಪ್ರೀತಿಸುತ್ತೇನೆ ಅನ್ನುವುದು ಸೇರಿ ಲೈಂಗಿಕವಾಗಿ ತೊಂದರೆ ಕೊಡುತ್ತಿದ್ದ. ಈ ಬಗ್ಗೆ ಕೇಳಲು ಹೋದ ಅಣ್ಣಂದಿರಾದ ಪರಶುರಾಮ ಹಳ್ಳಿ, ಪ್ರಭು ಹಳ್ಳಿ ಅವರಿಗೆ ಸಂಗಮೇಶನು ಚಿದಾನಂದ ಕಟ್ಟಿಮನಿ, ಮೌನೇಶ ಮಾದರ, ಇನ್ನಿತರ 3-4 ಯುವಕರೊಂದಿಗೆ ಸೇರಿ ಹೊಡಿ ಬಡಿ ಮಾಡಿ ಜೀವ ಬೆದರಿಕೆ ಹಾಕಿದ್ದರು ಎನ್ನುವುದು ಮೃತಳು ದಾಖಲಿಸಿದ್ದ ದೂರಿನ ಸಾರಾಂಶವಾಗಿದೆ.
ಮಂಗಳವಾರ ಬೆಳಗ್ಗೆ ತಾಯಿ ಮನೆಯಿಂದ ಹೊರಗೆ ಹೋದ ಸಮಯ ನೋಡಿಕೊಂಡು ವಾಸಕ್ಕೆ ಇದ್ದ ಒಂದೇ ಚಿಕ್ಕ ಕೋಣೆಯಲ್ಲಿ ಕುತ್ತಿಗೆಗೆ ಹಗ್ಗ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾಳೆ. ತಾಯಿ ಮರಳಿ ಮನೆಗೆ ಬಂದು ನೋಡಿದಾಗ ಇದು ಬೆಳಕಿಗೆ ಬಂದಿದೆ.
ವಿಷಯ ತಿಳಿದು ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐಗಳಾದ ಸಂಜಯ್ ತಿಪ್ಪರಡ್ಡಿ, ಆರ್.ಎಲ್. ಮನ್ನಾಬಾಯಿ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿ, ಪಂಚರ ಸಮಕ್ಷಮ ಪಂಚನಾಮೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದರು.
ಮೃತಳ ಸೋದರ ಸಂಬಂದಿ ಪರಶುರಾಮ ಹಳ್ಳಿ ಮಾತನಾಡಿ, ನಮ್ಮ ಸಹೋದರಿಗೆ ಲೈಂಗಿಕ ಕಿರುಕುಳ ನೀಡಿದವರು ಡ್ರಗ್ಸ್ ಅಡಿಕ್ಟ್ ಆದವರು. ನಮ್ಮ ಸಹೋದರಿಗೆ ತೊಂದರೆ ಕೊಡಬೇಡ ಎಂದು ಹೇಳಲು ಹೋದರೆ ನಮ್ಮ ಮೇಲೆಯೇ ಹಲ್ಲೆ ನಡೆಸಿದ್ದರು. ಆ ಯುವಕರು ಡ್ರಗ್ಸ್ ಅಡಿಕ್ಟ್‌ಗಳಾಗಿದ್ದರಿಂದ ಅವರಿಗೆ ಹೆದರಿ ನಮಗೆ ಯಾರೂ ನೆರವಿಗೆ ಬರಲಿಲ್ಲ. ನಮ್ಮ ಸಹೋದರಿಯನ್ನು ಕಳೆದುಕೊಂಡಿದ್ದೇವೆ. ಆ ದುಷ್ಟ ಯುವಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಕ್ರೋಶ ತೋಡಿಕೊಂಡರು.
ಮೃತಳ ತಂದೆ ನಿಧನರಾಗಿದ್ದು ಆಕೆ ತಾಯಿಯೊಂದಿಗೆ ವಾಸವಾಗಿದ್ದಳು. ಇವಳಿಗೆ 18 ವರ್ಷ ತುಂಬಿದ ನಂತರ ಮದುವೆ ಮಾಡಲು ಎಂಗೇಜ್‌ಮೆಂಟ್ ಮಾಡಲಾಗಿತ್ತು. ಆ ವರನಿಗೆ ಸಂಗಮೇಶನು ತಾನು ಆಕೆಯೊಂದಿಗೆ ಜೊತೆಗಿದ್ದ ೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅಸಭ್ಯ, ಅಶ್ಲೀಲ ಸಂದೇಶ ಕಳಿಸಿದ್ದು ಗಲಾಟೆಗೆ ಕಾರಣವಾಗಿ ಪೋಕ್ಸೋ ಅಡಿ ಸಂಗಮೇಶ ಇನ್ನಿತರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಕರಣ ಗಂಭೀರ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಆರೋಪಿಗಳಾದ ಸಂಗಮೇಶ ಜುಂಜವಾರ, ಚಿದಾನಂದ ಕಟ್ಟಿಮನಿ, ಗದ್ದೆಪ್ಪ ನಾಯ್ಕೋಡಿ, ಮೌನೇಶ ಮಾದರ, ರಾಘವೇಂದ್ರ, ಸಂಗಮೇಶ ಮಸಬಿನಾಳ ಅವರನ್ನು ಪೊಲೀಸರು ಬಂಧಿಸಿ ಕಾನೂನು ವಶಕ್ಕೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಜಿಲ್ಲಾ ಕೇಂದ್ರದಿಂದ ೋರೆನ್ಸಿಕ್ ತಜ್ಞರು ಆಗಮಿಸಿ ಅಗತ್ಯ ಮಾಹಿತಿ ಸಂಗ್ರಹಿಸಿದರು.
ತಾಲೂಕಿನ ಸರ್ಕಾರಿ ವಸತಿ ಶಾಲೆಯೊಂದರ ಕಾಂಪೌಂಡ್ ಹತ್ತಿರ ಅದೇ ಶಾಲೆಯ 10ನೇ ತರಗತಿಯ ಅಪ್ರಾಪ್ತ ವಿದ್ಯಾರ್ಥಿನಿಗೆ ಮೌನೇಶ ಮಾದರ ಎಂಬಾತ ಬಲವಂತವಾಗಿ ತಾಳಿ ಕಟ್ಟಿ ಮದುವೆಯಾಗಲು ಯತ್ನಿಸಿ ಅದರ ವಿಡಿಯೋ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದ ಕುರಿತು ನ.28ರಂದು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಆ ವಿದ್ಯಾರ್ಥಿನಿಯು ಪೋಕ್ಸೋ ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆ ಅಡಿ ಪ್ರಕರಣ ದಾಖಲಿಸಿದ್ದಳು. ಇದರಲ್ಲಿಯೂ ಮೌನೇಶ, ಸಂಗಮೇಶ ಜುಂಜವಾರ ಇಬ್ಬರೂ ಆರೋಪಿಗಳಾಗಿರುವುದನ್ನು ಸ್ಮರಿಸಬಹುದು.