ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

puc suicide
Published on

ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮೈಸೂರಿನ ಕಲಾಮಂದಿರ ಅಪಾರ್ಟ್‌ಮೆಂಟ್‌ನಲ್ಲಿ (ಪಿಡಬ್ಲೂಡಿ ವಸತಿ ಗೃಹ) ಮಂಗಳವಾರ ದಿವಂಗತ ರಂಗಶೆಟ್ಟಿ ಮತ್ತು ಮಂಜುಳಾ ದಂಪತಿ ಪುತ್ರಿ ಐಶ್ವರ್ಯ(17) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ.

ನಗರದ ಒಂಟಿಕೊಪ್ಪಲಿನ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಐಶ್ವರ್ಯ ಫಲಿತಾಂಶ ಹೊರ ಬೀಳುತ್ತಿದ್ದಂತೆ ಆಕೆ ರಸಾಯನಶಾಸ್ತ್ರದಲ್ಲಿ ಅನುತ್ತೀರ್ಣರಾಗಿದ್ದಳು. ಮನೆಯಲ್ಲಿ ಯಾರೂ ಇಲ್ಲದಾಗ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ವಲ್ಪ ಹೊತ್ತಿನ ಬಳಿಕ ಐಶ್ವರ್ಯ ಅವರ ಸೋದರ ಮನೆಗೆ ಬಂದಾಗ ವಿಷಯ ಗೊತ್ತಾಗಿದೆ. ಸ್ಥಳಕ್ಕೆ ಆಗಮಿಸಿದ ದೇವರಾಜ ಠಾಣೆ ಪೊಲೀಸರು, ಆಗಮಿಸಿ ಪರಿಶೀಲನೆ ನಡೆಸಿದರು. ಮಗಳನ್ನು ಕಳೆದುಕೊಂಡಿದ್ದಕ್ಕೆ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು.

‘ಅಮ್ಮ ಮತ್ತು ಅಣ್ಣ ನನ್ನನ್ನು ಕ್ಷಿಮಿಸಿ. ನನ್ನ ಮೇಲೆ ಬೇಜಾರು ಮಾಡಿಕೊಳ್ಳಬೇಡಿ. ನಾನು ಅಪ್ಪ ಇರುವ ಸ್ಥಳಕ್ಕೆ ಹೋಗುತ್ತಿದ್ದೇನೆ’ ಎಂದು ಡೆತ್ ನೋಟ್ ಬರೆದಿದ್ದಾಳೆ. ಈ ಸಂಬಂಧ ದೇವರಾಜ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಜುಳಾ ಅವರ ಪತಿ ರಂಗ ಶೆಟ್ಟಿ ಅವರು ಲೋಕೋಪಯೋಗಿ ಇಲಾಖೆಯಲ್ಲಿ ನೌಕರರಾಗಿದ್ದು, ಅವರ ನಿಧನದ ಬಳಿಕ ಕೆಲಸವನ್ನು ಮಂಜುಳಾ ಅವರಿಗೆ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net