

ಕೆ.ಎಂ.ದೊಡ್ಡಿ: ಮೆಣಸಗೆರೆ ಗ್ರಾಮದ ಜ್ಞಾನಮುದ್ರ ವಿದ್ಯಾಮಂದಿರ ಐಸಿಎಸ್‌ಇ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಬಿ.ಆರ್.ಪ್ರತೀಕ್‌ಗೌಡ ವೈಜ್ಞಾನಿಕ ಸಂಶೋಧನಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿ ಪ್ರತಿಷ್ಠಿತ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್, ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾನೆ.
ದೊಡ್ಡಬಳ್ಳಾಪುರದ ಅನಿಬೆಸೆಂಟ್ ಪಾರ್ಕ್‌ನಲ್ಲಿ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ ವತಿಯಿಂದ ಅ.1ರಿಂದ 9ರವರೆಗೆ ಆಯೋಜಿಸಿದ್ದ ನಾನು ವಿಜ್ಞಾನಿ-2025 ರಾಜ್ಯ ಮಟ್ಟದ ಪ್ರಥಮ ಟೆಲಿಸ್ಕೋಪ್ 7 ದಿನಗಳ ತರಬೇತಿ ಶಿಬಿರದಲ್ಲಿ ಭಾಗವಹಿಸಿ ಆಪ್ಟಿಕಲ್ ಗ್ಲಾಸ್, ಮಿರರ್ ಹೋಲ್ಡರ್, ಟೆಲಿಸ್ಕೋಪ್ ಟ್ಯೂಬ್ ಪೈಂಟರ್, ಫೋಕಸರ್ ಮುಂತಾದ ಭಾಗಗಳನ್ನು ಬಳಸಿ ಸಂಪೂರ್ಣವಾಗಿ ಕಾರ್ಯನಿರ್ವಹಿಸುವ ಟೆಲಿಸ್ಕೋಪನ್ನು ತಯಾರಿಸಿ, ಅತ್ಯಂತ ಕಡಿಮೆ ಅವಧಿಯಲ್ಲಿ ಅಂತಿಮ ಆಪ್ಟಿಕಲ್ ಅಲೈನ್ಮೆಂಟ್ ಮತ್ತು ಕೊಲಿಮೇಷನನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಸ್ಥಾನ ಪಡೆದಿದ್ದಾನೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾಜಿ ಅಧ್ಯಕ್ಷ ಡಾ.ಎ.ಎಸ್.ಕಿರಣ್‌ಕುಮಾರ್ ಅವರು ಟೆಲಿಸ್ಕೋಪ್ ಅಸೆಂಬ್ಲಿ ಪ್ರಾಜೆಕ್ಟ್‌ನಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರತೀಕ್‌ಗೌಡಗೆ ಪ್ರಮಾಣ ಪತ್ರವನ್ನು ನೀಡಿ ವಿದ್ಯಾರ್ಥಿ ಸಾಧನೆಯನ್ನು ಪ್ರಶಂಸಿಸಿದ್ದಾರೆ. ವಿಷಯ ಕುರಿತು ವಿದ್ಯಾರ್ಥಿಗೆ ವಿಜ್ಞಾನ ಮತ್ತು ನಾವೀನ್ಯತೆಗಳ ಬಗ್ಗೆ ಇರುವ ಆಸಕ್ತಿ ಮತ್ತು ಸಾಮರ್ಥ್ಯವನ್ನು ಪ್ರತಿಬಿಂಬಿಸುತ್ತದೆ.
ಬಿದರಹೊಸಹಳ್ಳಿ ರಾಜಣ್ಣ-ರೇಖಾ ದಂಪತಿ ಪುತ್ರ ಪ್ರತೀಕ್‌ಗೌಡರ ಸಾಧನೆಗೆ ಜ್ಞಾನಮುದ್ರ ವಿದ್ಯಾಮಂದಿರ ಶಾಲೆ ಸಂಸ್ಥಾಪಕರಾದ ಡಾ.ಸೌಮ್ಯಾರಾಜೇಶ್, ಶಿವಮ್ಮ ಶಿವಕುಮಾರ್, ಸಂಸ್ಥೆ ಆಡಳಿತ ಅಧಿಕಾರಿ ಪ್ರಭಾವತಿ, ಪ್ರಾಂಶುಪಾಲೆ ಕೆ.ಎಸ್.ಶ್ರುತಿ ಅಭಿನಂದನೆ ಸಲ್ಲಿಸಿದ್ದಾರೆ.