ಸುಸ್ಥಿರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣ ಸಂಕಲ್ಪ;ವೆಂಕಪ್ಪಯ್ಯ ದೇಸಾಯಿ ಅಭಿಮತ

IMG-20250214-WA0049.jpg
Published on

ಬೆಳಗಾವಿ: ಭಾರತೀಯ ಪುರಾತನ ಜ್ಞಾನ ಪರಂಪರೆಯೊಂದಿಗೆ ಆಧುನಿಕ ವಿಜ್ಞಾನ ಸಮನ್ವಯಗೊಂಡರೆ ಮಾಲಿನ್ಯ ರಹಿತ ಹಾಗು ಸುಸ್ಥಿರ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣವಾಗುತ್ತದೆ ಎಂದು ಭಾರತೀಯ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕ ವೆಂಕಪ್ಪಯ್ಯ ದೇಸಾಯಿ ಅಭಿಮತ ವ್ಯಕ್ತಪಡಿಸಿದರು.

ನಾಗನೂರು ರುದ್ರಾಕ್ಷಿ ಮಠ, ಸಿದ್ಧರಾಮೇಶ್ವರ ಶಿಕ್ಷಣ ಸಂಸ್ಥೆ ಹಾಗೂ ಟ್ರಾನ್ಸ್ ಡಿಸಿಪ್ಲೆನೆರಿ ಲರ್ನಿಂಗ್ ಸಲ್ಯೂಷನ್ ಸಹಯೋಗದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಸಂಶೋಧನಾ ಕೇಂದ್ರದ ಅಡಿಗಲ್ಲು ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿಗೆ ರೈತರು ಹುಲ್ಲು, ಕಬ್ಬಿನ ರವಧಿ ಸೇರಿದಂತೆ ಸಾವಯುವ ತ್ಯಾಜ್ಯವನ್ನು ಸುಡುತ್ತಿರುವುದು ಆತಂಕಕಾರಿ ವಿಷಯ. ಇದರಿಂದ ಮಣ್ಣಿನಲ್ಲಿರುವ ಪೋಷಕಾಂಶಗಳು ನಾಶವಾಗುತ್ತಿದ್ದು ರೈತರ ಇಳುವರಿ ಕಡಿಮೆಯಾಗುತ್ತಿದೆ. ಇಲ್ಲಿನ ಸಂಶೋಧಕರು ಈ ಕುರಿತು ನವೀನ ತಂತ್ರಜ್ಞಾನಗಳ ಸಂಶೋಧನೆ ಮಾಡಿ ರೈತರಿಗೆ ನೆರವಾಗಬೇಕು ಎಂದರು.

ಜಿಪಂ ಸಿಇಒ ರಾಹುಲ ಶಿಂಧೆ ಮಾತನಾಡಿ, ಐಐಟಿ ಅಂತಹ ಸಂಶೋಧನಾ ಕೇಂದ್ರಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕೆಂಬುದು ಕನಸು ಕಾಣುತ್ತಾರೆ. ಆದರೆ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಂತಹ ಅವಕಾಶ ವಂಚಿತ ಆಸಕ್ತ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ಕೇಂದ್ರ ಬೆಳಗಾವಿಯಲ್ಲಿ ಪ್ರಾರಂಭಿಸುತ್ತಿರುವ ರುದ್ರಾಕ್ಷಿ ಮಠದ ಶ್ರೀಗಳ ಕಾರ್ಯ ಶ್ಲಾಘನೀಯ ಎಂದರು.

ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಮಾತನಾಡಿ, ನಾಡಿನ ಬಡ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಈ ಸಂಶೋಧನಾ ಕೇಂದ್ರ ಪ್ರಾರಂಭಿಸಿದ್ದು, ಇಲ್ಲಿ ಸಂಶೋಧನೆ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಸಂಶೋಧನಾ ಪತ್ರಿಕೆಗಳನ್ನ ಪ್ರಕಟಿಸಲು, ಪೇಟೆಂಟ್ ಪಡೆಯಲು ಹಾಗೂ ತಮ್ಮದೇ ಆದ ಸ್ವಂತ ಸ್ಟಾರ್ಟ್ ಅಪ್ ಗಳನ್ನು ಪ್ರಾರಂಭಿಸಲು ಸಹಕಾರಿಯಾಗಲಿದೆ ಎಂದರು.

ಸ್ಥಳೀಯ ಉದ್ಯಮಿಗಳಿಗೆ ಸಂಶೋಧನೆ ಕೈಗೊಳ್ಳಲು ಅಥವಾ ಅಭಿವೃದ್ಧಿಪಡಿಸಲು ಸೂಕ್ತ ವೇದಿಕೆ ಇಲ್ಲದೆ ಇರುವ ಕಾರಣ ಅವರೂ ಸಹ ಈ ಸಂಶೋಧನಾ ಕೇಂದ್ರಕ್ಕೆ ಬಂದು ತಮ್ಮ ಉಪಕರಣ ಸಂಶೋಧನೆ ಮತ್ತು ಅಭಿವೃದ್ಧಿ ಮಾಡಬಹುದು. ಇದಕ್ಕೆ ಬೇಕಾದ ವ್ಯವಸ್ಥೆಯನ್ನು ಈ ಸಂಶೋಧನಾ ಮತ್ತು ತರಬೇತಿ ಕೇಂದ್ರದಲ್ಲಿ ಮಾಡಲಾಗುತ್ತದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ನಗರದಲ್ಲಿ ಸೌಲಭ್ಯಗಳಿಲ್ಲದ ಶಾಲೆಗಳ ವಿದ್ಯಾರ್ಥಿಗಳು, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಇಲ್ಲಿ ನಿರಂತರವಾಗಿ ವಿವಿಧ ವಿಷಯಗಳ ಮೇಲೆ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದು. ವಿದ್ಯಾರ್ಥಿಗಳು ಇದರಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬಹುದು ಎಂದರು.

ಇದೇ ಸಂದರ್ಭದಲ್ಲಿ ವಿಟಿಯು ಕುಲಸಚಿವ ಡಾ. ಬಿ. ರಂಗಸ್ವಾಮಿ ಹಾಗೂ ಇನ್ಫೋಸಿಸ್ ನ ಹಿರಿಯ ಆರ್ಥಿಕ ವ್ಯವಸ್ಥಾಪಕ ಕೆ.ಎಚ್. ರವೀಂದ್ರ ಸನ್ಮಾಯಿಸಲಾಯಿತು.

ಡಾ. ಬಸನಗೌಡ ಪಾಟೀಲ, ಪ್ರಾಧ್ಯಾಪಕ ಏ.ಕೆ. ಪಾಟೀಲ, ರಾಜಶೇಖರ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net