

ಚಾಮರಾಜನಗರ: ಗ್ರಾಮ ಪಂಚಾಯಿತಿಗಳಿಗೆ ಸಮಿತಿ ರಚನೆ ಮಾಡಲು ಹೊರಟಿರುವುದು ಸಂವಿಧಾನ ಬಾಹಿರವಾಗಿದೆ. ಸರ್ಕಾರ ವಾಮಮಾರ್ಗದ ಮೂಲಕ ತಳಮಟ್ಟದಲ್ಲಿ ಬಿಜೆಪಿ ಸಂಘಟನೆ ಮಾಡಲು ಹೊರಟಿದೆ ಎಂದು ಕರ್ನಾಟಕ ರಾಜ್ಯ ಜಿಲ್ಲಾ ಪಂಚಾಯತ್ ಒಕ್ಕೂಟದ ರಾಜ್ಯಾಧ್ಯಕ್ಷ ಕೆರೆಹಳ್ಳಿ ನವೀನ್ ಆರೋಪಿಸಿದ್ದಾರೆ.
ಗ್ರಾಪಂ ಆಡಳಿತಾವಧಿ ಪೂರ್ಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಚುನಾವಣೆ ನಡೆಸುವವರೆಗೂ ಪ್ರಸ್ತುತ ಇರುವ ಹಾಲಿ ಸದಸ್ಯರನ್ನೇ ಮುಂದುವರೆಸಬೇಕು. ಈ ಮೂಲಕ ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಬೇಕು. ಗ್ರಾಪಂಗಳಿಗೆ ಬಿಜೆಪಿ ಸಮಿತಿ ರಚನೆ ಮಾಡಲು ಮುಂದಾದರೆ ಪಂಚಾಯಿತಿ ಸದಸ್ಯರನ್ನೊಳಗೊಂಡು ಪ್ರಗತಿಪರ ಸಂಘಟನೆಗಳೊಂದಿಗೆ ಸರ್ಕಾರದ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು.
ಕರೊನಾ ಬಿಕ್ಕಟ್ಟಿನ ನೆಪದಲ್ಲಿ ಚುನಾವಣೆ ನಡೆಸದೆ ಬಿಜೆಪಿ ಕಾರ್ಯಕರ್ತರನ್ನು ನಾಮನಿರ್ದೇಶಿತ ಸದಸ್ಯರನ್ನಾಗಿ ಮಾಡಿ ಆಡಳಿತ ಸಮಿತಿ ರಚನೆ ಮಾಡಲು ಸರ್ಕಾರ ಮುಂದಾಗಿದೆ ಎಂದು ತಿಳಿದು ಬಂದಿದೆ. ಈ ಸಮಿತಿಯ ಉದ್ದೇಶ ಗ್ರಾಮೀಣಾಭಿವೃದ್ಧಿಯೋ ಇಲ್ಲ ಪಕ್ಷದ ಬಲವರ್ಧನೆಯೋ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು. ಸರ್ಕಾರ ಈ ಉದ್ದೇಶವನ್ನು ಕೈ ಬಿಟ್ಟು ಜೂನ್ 15 ರಂದು ಪೂರ್ಣಗೊಳ್ಳುವ ಗ್ರಾಪಂ ಆಡಳಿತ ಮಂಡಳಿಯೇ ಅಧಿಕಾರ ಮುಂದುವರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಬದನಗುಪ್ಪೆ ಗ್ರಾಪಂ ಸದಸ್ಯ ರಮೇಶ್, ಬೂದಂಬಳ್ಳಿ ಶಂಕರ್, ಮಹೇಶ್ ಇದ್ದರು.