ಗ್ರಾಮಗಳಿಗೆ ವಿದ್ಯುತ್ ಪೂರೈಸಲು ಹರಸಾಹಸ

3spt3
ವಿದ್ಯುತ್ ಮಾರ್ಗವನ್ನು ದುರಸ್ತಿ ಪಡಿಸುತ್ತಿರುವ ಸೆಸ್ಕ್ ಸಿಬ್ಬಂದಿ.
Published on

ಸೋಮವಾರಪೇಟೆ: ತಾಲೂಕಿನಲ್ಲಿ ವರುಣನ ಆರ್ಭಟ ತುಸು ಕಡಿಮೆಯಾಗಿದ್ದು, ಕತ್ತಲೆಯಲ್ಲಿರುವ ಗ್ರಾಮಗಳಿಗೆ ವಿದ್ಯುತ್ ನೀಡಲು ಸೆಸ್ಕ್ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ.


ಪ್ರಸಕ್ತ ವರ್ಷ ಜುಲೈ ತಿಂಗಳಲ್ಲಿ ನಿರಂತರ ಗಾಳಿ-ಮಳೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಮರಗಳು ಬುಡಸಮೇತ ವಿದ್ಯುತ್ ಮಾರ್ಗದ ಮೇಲೆ ಬಿದ್ದ ಪರಿಣಾಮ, ಮಾರ್ಗ ಸರಿಪಡಿಸಲು ಸೆಸ್ಕ್ ಸಿಬ್ಬಂದಿಗೆ ಸವಾಲಾಗಿತ್ತು.
ಕೊಡಗು ಜಿಲ್ಲೆಯ ಮಟ್ಟಿಗೆ ಅತೀ ಹೆಚ್ಚು ಮಳೆ ಸೋಮವಾರಪೇಟೆ ತಾಲೂಕಿನಲ್ಲಿ ಸುರಿದಿದೆ. ಜನವರಿಯಿಂದ ಇಲ್ಲಿಯ ವರಗೆ 2,563 ಮಿಲಿ ಮೀಟರ್ ಮಳೆ ಸುರಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,275.54 ಮಿ.ಮೀ ಮಳೆಯಾಗಿತ್ತು. ಕಿರಗಂದೂರು, ತಾಕೇರಿ, ಕುಂದಳ್ಳಿ, ಬೀದಳ್ಳಿ, ಹೆಗ್ಗಡಮನೆ, ಕೊತ್ನಳ್ಳಿ ಇನ್ನಿತರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಲಿಲ್ಲ. ಕಿರಗಂದೂರು, ತಾಕೇರಿ, ಗ್ರಾಮಗಳು 15 ದಿನಗಳ ಕಾಲ ವಿದ್ಯುತ್ ಇಲ್ಲದೆ ದಿನ ಕಳೆಯುವಂತಾಗಿತ್ತು.
ವಿದ್ಯುತ್ ಸಮಸ್ಯೆ ಎದುರಿಸಿದ ಬಹತೇಕ ಗ್ರಾಮಗಳಿಗೆ ಸದ್ಯ ಕೆಲ ಗಂಟೆಗಳ ಕಾಲ ವಿದ್ಯುತ್ ಸರಬರಾಜಾಗುತ್ತಿದೆ. ಇದರಿಂದ ಗ್ರಾಮೀಣ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.


ಕುಶಾಲನಗರದಿಂದ ಸೋಮವಾರಪೇಟೆಗೆ ಹಾದು ಬಂದಿರುವ 33ಕೆ.ವಿ. ವಿದ್ಯುತ್ ಮಾರ್ಗ ಯಡವನಾಡು ಮೀಸಲು ಅರಣ್ಯ ಹಾಗೂ ಕಾಫಿ ತೋಟದೊಳಗೆ ಹಾದುಹೋಗಿರುವುದರಿಂದ, ಮಳೆಗಾಲದಲ್ಲಿ ಮರಗಳು ಬಿದ್ದರೆ, ಮಾರ್ಗ ಸರಿಪಡಿಸಲು ಕಷ್ಟಕರ. ಅರಣ್ಯ, ತೋಟದೊಳಗೆ ವಾಹನಗಳು ಸಂಚರಿಸಲು ಸಾಧ್ಯವಿಲ್ಲದ ಕಾರಣ ಸೆಸ್ಕ್ ಸಿಬ್ಬಂದಿ ಸಮಸ್ಯೆಗೆ ಸಿಲುಕಿಕೊಳ್ಳುತ್ತಾರೆ.
ಸೋಮವಾರಪೇಟೆ ಉಪವಿಭಾಗದ ಶನಿವಾರಸಂತೆ, ಕೊಡ್ಲಿಪೇಟೆ, ಅಲೂರುಸಿದ್ದಾಪುರ, ಶಾಂತಳ್ಳಿ, ಸೋಮವಾರಪೇಟೆ ವಲಯಗಳಲ್ಲಿ ವಿದ್ಯುತ್ ಮಾರ್ಗ ಕಾಫಿ ತೋಟದೊಳಗೆ ಹಾದು ಹೋಗಿರುವುದರಿಂದ ಮಳೆಗಾಲದಲ್ಲಿ ಮರ ಬಿದ್ದರೆ, ಸಮಸ್ಯೆ ಎದುರಾಗುತ್ತದೆ. ರಸ್ತೆಬದಿಗೆ ಮಾರ್ಗ ಬದಲಾಯಿಸುವಂತೆ ಅನೇಕ ವರ್ಷಗಳಿಂದ ಗ್ರಾಮಸ್ಥರು ಬೇಡಿಕೆ ಇಡುತ್ತಿದ್ದಾರೆ. ಆದರೆ ಸರ್ಕಾರ ಸ್ಪಂದಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.
ಕಾಗಡೀಕಟ್ಟೆಯಿಂದ ಹೊನವಳ್ಳಿ, ಕೂಗೇಕೋಡಿ. ಸುಳಿಮಳ್ತೆ ಗ್ರಾಮಕ್ಕೆ ಕಾಫಿ ತೋಟದೊಳಗೆ ವಿದ್ಯುತ್ ತಂತಿಗಳನ್ನು ಹಾಕಲಾಗಿದೆ. ಸುಮಾರು ನಾಲ್ಕು ದಶಕದಿಂದ ಮಾರ್ಗ ಬದಲಾಯಿಸಿಲ್ಲ ಎಂದು ಹೊನವಳ್ಳಿ ಗ್ರಾಮದ ವೀರೇಶ್ ದೂರಿದ್ದಾರೆ.
ಸೋಮವಾರಪೇಟೆ, ದುದ್ದಗಲ್ಲು, ತಾಕೇರಿ ಗ್ರಾಮದವರೆಗಿನ ವಿದ್ಯುತ್ ಮಾರ್ಗ ಕಾಫಿ ತೋಟದೊಳಗೆ ಹಾದು ಹೋಗಿದ್ದು, ಮಳೆಗಾಲದಲ್ಲಿ ವಾರಗಟ್ಟಲೆ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ. ತಲ್ತಾರೆಶೆಟ್ಟಳ್ಳಿ, ತಲ್ತಾರೆ, ಬಗ್ಗನಮನೆ ಮಾರ್ಗ ಕಾಫಿ ತೋಟದೊಳಗೆ ಹಾದುಹೋಗಿದೆ.
ಕನ್ನಳ್ಳಿ ಕಟ್ಟೆಯಿಂದ ಹರಗ ಮಾರ್ಗದಲ್ಲಿ ಹೊಳೆಯೊಳಗೆ ಕಂಬಗಳನ್ನು ನೆಡಲಾಗಿದೆ. ವಿದ್ಯುತ್ ತಂತಿಗಳು ಹಾದುಹೋಗಿವೆ. ಕುಮಾರಳ್ಳಿ ಬಾಚಳ್ಳಿ, ಬೀದಳ್ಳಿ, ಕೊತ್ನಳ್ಳಿ, ಮಲ್ಲಳ್ಳಿ, ತಡ್ಡಿಕೊಪ್ಪ, ನಾಡ್ನಳ್ಳಿ, ಹೆಗ್ಗಡಮನೆ ಗ್ರಾಮಗಳಲ್ಲಿ ಹಾದುಹೋಗಿರುವ ವಿದ್ಯುತ್ ಮಾರ್ಗ ಹಳೆಯದಾಗಿದ್ದು, ರಸ್ತೆಬದಿಗೆ ಮಾರ್ಗ ಬದಲಾಯಿಸಿದರೆ ಮಳೆಗಾಲದ ವಿದ್ಯುತ್ ಸಮಸ್ಯೆ ಬಗೆಹರಿಸಬಹುದು ಎಂದು ಗ್ರಾಮೀಣ ಜನರ ಆಗ್ರಹ.
ಪ್ರಸಕ್ತ ವರ್ಷ ಶಾಂತಳ್ಳಿ ಹೋಬಳಿಯಲ್ಲಿ ಅತೀ ಹೆಚ್ಚಿನ ಕಂಬಗಳಿಗೆ ಹಾನಿಯಾಗಿದೆ. ತಾಲೂಕಿನಲ್ಲಿ ಒಟ್ಟು 468 ಕಂಬಗಳಿಗೆ ಹಾನಿಯಾಗಿದೆ. ಈಗಾಗಲೇ 414 ಕಂಬಗಳನ್ನು ಸರಿಪಡಿಸಲಾಗಿದೆ.

ಸೋಮವಾರಪೇಟೆ ಉಪವಿಭಾಗದ ಎಲ್ಲ ಗ್ರಾಮಗಳಿಗೆ ವಿದ್ಯುತ್ ಕಲ್ಪಿಸುವ ಪ್ರಯತ್ನ ಮಾಡಲಾಗಿದೆ. ಮಳೆ ಕಡಿಮೆಯಾದರೆ ಇನ್ನೊಂದು ವಾರದಲ್ಲಿ ಎಲ್ಲ ಕಡೆ ವಿದ್ಯುತ್ ಕಲ್ಪಿಸುತ್ತೇವೆ. ಕಿರಗಂದೂರು ಗ್ರಾಮದಲ್ಲಿ ಅಗಾಗ್ಗೆ ಮರಬಿದ್ದು ಹೆಚ್ಚಿನ ಕಂಬಗಳಿಗೆ ಹಾನಿಯಾಗಿತ್ತು. ಕಾಫಿ ತೋಟ, ಅರಣ್ಯದೊಳಗೆ ಬಹುತೇಕ ವಿದ್ಯುತ್ ಮಾರ್ಗವಿದ್ದು, ದುರಸ್ತಿ ಕೆಲಸ ಕಷ್ಟಕರವಾಗಿರುತ್ತದೆ. ಉಪವಿಭಾಗದಲ್ಲಿ 92 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಮುಂದೆಯೂ ಮಳೆ ಇರುವುದರಿಂದ 10 ಮಂದಿ ಮೆಕ್ಯಾನಿಕ್ ದರ್ಜೆ, ಮಾರ್ಗದಾಳುಗಳನ್ನು ಚಾಮರಾಜನಗರದಿಂದ ಕರೆಸಿಕೊಳ್ಳಲಾಗಿದೆ ಎಂದು ಸೆಸ್ಕ್ ಉಪವಿಭಾಗದ ಎಇಇ ರವಿಕುಮಾರ್ ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net