ಹಕ್ಕುಪತ್ರ ಪಡೆಯಲು ಹರಸಾಹಸ

19adarshkdga1
Published on

ಆದರ್ಶ್ ಅದ್ಕಲೇಗಾರ್ ಮಡಿಕೇರಿ


ಮಡಿಕೇರಿ ನಗರಸಭೆ ವ್ಯಾಪ್ತಿಯ ರಾಜಾರಾಜೇಶ್ವರಿ ನಗರದಲ್ಲಿ ಸುಮಾರು ೧೦೦ಕ್ಕೂ ಅಧಿಕ ಮನೆಗಳಿಗೆ ಹಕ್ಕಪತ್ರ ಸಮಸ್ಯೆ ಕಾಡುತ್ತಿದೆ.


ರಾಜ್ಯದ ನಂ.೧ ಪತ್ರಿಕೆ ವಿಜಯವಾಣಿ ವತಿಯಿಂದ ನಗರಸಭೆಯ ೪ನೇ ವಾರ್ಡ್‌ನ ಸದಸ್ಯರಾದ ಎಂ.ಕೆ.ಮನ್ಸೂರ್ ಆಲಿರವರೊಂದಿಗೆ ಹಮ್ಮಿಕೊಂಡಿದ್ದ ವಾರ್ಡ್‌ವಾಚ್ ಕಾರ್ಯಕ್ರಮದಲ್ಲಿ ನಿವಾಸಿಗಳು ಹಕ್ಕುಪತ್ರ, ರಸ್ತೆ, ಚರಂಡಿ, ನೀರಿನ ಸಮಸ್ಯೆಗಳ ಕುರಿತು ಸದಸ್ಯರ ಗಮನ ಸೆಳೆದರು.


ಜೀವನಕ್ಕೊಂದು ಸ್ವಂತ ಸೂರು. ಸ್ವಂತ ನೆಲೆ ಇರಬೇಕು ಎಂಬ ಆಸೆಯಿಂದ ಮಡಿಕೇರಿ ನಗರದಲ್ಲಿ ಮನೆಗಳನ್ನು ಖರೀದಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಕೂಲಿನಾಲಿ ಮಾಡಿ ಜೀವನ ಸಾಗಿಸುವ ನಮಗೆ ಹಕ್ಕುಪತ್ರ ಪಡೆಯಲು ಹರಸಾಹಸ ಪಡಬೇಕಾಗಿದೆ. ಸಾಕಷ್ಟು ಬಾರಿ ಮನವಿ ಮಾಡಿದರು, ಯಾವುದೇ ಪ್ರಯೋಜನವಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸುತ್ತಿಲ್ಲ ಎಂದು ನಿವಾಸಿಗಳು ದೂರಿದರು.


ರಾಜಾರಾಜೇಶ್ವರಿ ನಗರದಲ್ಲಿ ೩೦೦ಕ್ಕೂ ಅಧಿಕ ಮನೆಗಳಲ್ಲಿ ಸುಮಾರು ೧೦೦ಕ್ಕೂ ಅಧಿಕ ಜನರಿಗೆ ಹಕ್ಕುಪತ್ರವಿಲ್ಲ. ಮನೆಯ ಮೊದಲ ಮಾಲೀಕರು ಕೆಲವರು ಮರಣ ಹೊಂದಿದ್ದಾರೆ. ಕೆಲವರಿಗೆ ಮನೆಯ ಮೊದಲ ಮಾಲೀಕ ಯಾರೆಂಬುದೇ ತಿಳಿದಿಲ್ಲ. ಮನೆಗಳಿಗೆ ಸೂಕ್ತ ದಾಖಲೆಗಳಿವೆ. ಆದರೆ, ಪ್ರಸ್ತುತ ಮನೆ ಖರೀದಿ ಮಾಡಿದವರ ಹೆಸರಿಗೆ ಹಕ್ಕುಪತ್ರ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ನಿವಾಸಿಗಳು ಸದಸ್ಯರ ಗಮನ ಸೆಳೆದರು.


ಪ್ರತಿಕ್ರಿಯಿಸಿದ ಸದಸ್ಯರು, ನೂತನ ಪೌರಾಯುಕ್ತರ ಗಮನ ಸೆಳೆಯಲಾಗಿದೆ. ಈ ಹಿಂದೆಯೂ ಇದ್ದ ಪೌರಾಯುಕ್ತರು ಮಾಡುತ್ತೇವೆ ಎಂದು ಹೇಳಿ ವರ್ಗಾವಣೆಗೊಂಡಿದ್ದಾರೆ. ಬಡವರ ಸಮಸ್ಯೆ ಪರಿಹಾರ ಆಗುತ್ತಿಲ್ಲ. ವಿಧಾನಸಭೆ ಮುಂಚಿತವಾಗಿ ಸಮಸ್ಯೆ ಬಗೆಹರಿಯದಿದ್ದ ಪಕ್ಷದಲ್ಲಿ ನಿವಾಸಿಗಳೊಂದಿಗೆ ಸೇರಿ ಚುನಾವಣೆ ಬಹಿಷ್ಕಾರ ಮಾಡುತ್ತೇನೆ. ತಕ್ಷಣ ಸಂಬಂಧಪಟ್ಟವರು ನಿಯೋಗ ತೆರಳಿ ಜನರ ಹೆಸರಲ್ಲಿ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.


ಖಾಯಂ ಕಟ್ಟಡಕ್ಕೆ ಆಗ್ರಹ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ. ಮಳೆಗಾಲ ಸಂದರ್ಭ ನೀರು ಸೋರುತ್ತದೆ. ಸುಮಾರು ೧೬ ಮಕ್ಕಳಿರುವ ಅಂಗನವಾಡಿಗೆ ಸುಸಜ್ಜಿತ ಕಟ್ಟಡಬೇಕು ಎಂದು ಕಾರ್ಯಕರ್ತೆ ಕೆ.ಆರ್.ಪಾರಿಜಾತ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಸದಸ್ಯರು, ಈ ಸಂಬಂಧ ಇಲಾಖೆಗೆ ಮನವಿಪತ್ರ ಸಲ್ಲಿಸಲಾಗಿದೆ. ೨೦ ವರ್ಷದ ಕಟ್ಟಡಕ್ಕೆ ಶೀಘ್ರದಲ್ಲಿ ಶೀಟ್ ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.


ರಸ್ತೆ ಸರಿಪಡಿಸಿ: ರಸ್ತೆ ಸರಿಯಿಲ್ಲದೇ ಜನರು ಬಿದ್ದ ಗಾಯ ಮಾಡಿಕೊಂಡು ನಿದರ್ಶನಗಳಿವೆ. ಅಂಗನವಾಡಿಗಳಿಗೆ ನಿವಾಸಿಗಳ ಮಕ್ಕಳಿಗೆ ಬರಲು ಸಮಸ್ಯೆಯಾಗಿದೆ. ಸಂಬಂಧಪಟ್ಟವರು ಭರವಸೆ ನೀಡುತ್ತಾರೆ ಹೊರತು ಕಳೆದ ೯ ವರ್ಷದಿಂದ ರಸ್ತೆಯಾಗಿಲ್ಲ ಎಂದು ನಿವಾಸಿ ಸಿ.ವಿ.ರವಿ ಗಮನ ಸೆಳೆದರು.

ಚುಣಾವಣೆ ಬಹಿಷ್ಕಾರ ಎಚ್ಚರಿಕೆ
ನಗರದಲ್ಲಿ ಜಾಗ ಖರೀದಿ ಮಾಡಿರುವ ದಾಖಲೆ ಪರಿಶೀಲಿಸಿ, ಪ್ರಸ್ತುತ ವಾಸವಿರುವವರ ಹೆಸರಿಗೆ ಖಾತೆ ವರ್ಗಾವಣೆ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಒಂದು ವಾರದೊಳಗೆ ನಗರಸಭೆ ಮುಂಭಾಗ ನಿವಾಸಿಗಳೊಂದಿಗೆ ಪ್ರತಿಭಟನೆ ನಡೆಸಲಾಗುವುದು. ಜತೆಗೆ ರಾಜಾರಾಜೇಶ್ವರಿ ನಗರದ ನಿವಾಸಿಗಳು ಮುಂಬರುವ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವುದು ಎಂದು ನಿವಾಸಿಗಳು ಎಚ್ಚರಿಸಿದರು.

ಅಭಿವೃದ್ಧಿ ಕುಂಠಿತ
೨೦೧೮ರಲ್ಲಿ ಸಾಕಷ್ಟು ಅನುದಾನದೊಂದಿಗೆ ತನ್ನ ವಾರ್ಡ್‌ನಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಆದರೆ, ಪ್ರಸ್ತುತ ಆಡಳಿತ ಮಂಡಳಿಯಿಂದ ಕೇವಲ ೧೨.೫೦ ಲಕ್ಷದ ರಸ್ತೆ, ಬೋರ್, ತಡೆಗೋಡೆ ನಿರ್ಮಾಣದ ಕೆಲಸವಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭ ನೀರಿನ ಸಮಸ್ಯೆ ನೀಗಿಸಲು ೧೫ ಲಕ್ಷ ಲೀಟರ್‌ನ ನೀರಿನ ಟ್ಯಾಂಕ್‌ನ್ನು ಸುಮಾರು ೧.೫೦ ಲಕ್ಷದಲ್ಲಿ ನಿರ್ಮಾಣ ಮಾಡಲಾಗಿತ್ತು. ಪ್ರಸ್ತುತ ರಾಜಾರಾಜೇಶ್ವರಿ ನಗರದಲ್ಲಿರುವ ಎಸ್.ಸಿ/ಎಸ್.ಟಿ ವಾರ್ಡ್‌ಗಳಿಗೆ ಸಿಗಬೇಕಾದ ಹಣ ಸಿಗುತ್ತಿಲ್ಲ. ಆ ಹಣವನ್ನು ಎಸ್.ಸಿ/ಎಸ್.ಟಿ ಇಲ್ಲದ ವಾರ್ಡ್‌ಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಸದಸ್ಯ ಮನ್ಸೂರು ಆಲಿ ದೂರಿದರು.

೧೪ ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡು ಜೀವನಸಾಗಿಸುತ್ತಿದ್ದೇವೆ. ಆದರೆ, ನಮ್ಮ ಹೆಸರಿಗೆ ಹಕ್ಕುಪತ್ರ ಮಾಡಿಸಲು ಪರದಾಡುವಂತಾಗಿದೆ. ವರ್ಷಂಪ್ರತಿ ನಗರಸಭೆಗೆ ಕಂದಾಯ ಕಟ್ಟಿಸಿಕೊಳ್ಳಲಾಗುತ್ತಿದೆ. ಆದರೆ, ನಮ್ಮ ಹೆಸರಿಗೆ ಹಕ್ಕುಪತ್ರ ನೀಡಲು ಮೀನಾಮೇಷ ಎಣಿಸುತ್ತಿದೆ. ಕೇವಲ ಮತಕ್ಕಾಗಿ ಜನಪ್ರತಿನಿಧಿಗಳು ಆಗಮಿಸುತ್ತಾರೆಯೇ ಹೊರತು, ಜನರ ಸಮಸ್ಯೆಗೆ ಸ್ಪಂಧಿಸುತ್ತಿಲ್ಲ.
ನವೀನಾ, ಗ್ರಹಿಣಿ, ರಾಜರಾಜೇಶ್ವರಿ ನಗರ

ಅಂಗನವಾಡಿ ಕಟ್ಟಡದ ಗೋಡೆಗಳು ಬಿರುಕುಬಿಟ್ಟಿದೆ. ಮಳೆಗಾಲದಲ್ಲಿ ನೀರು ಅಂಗನವಾಡಿ ಒಳಭಾಗದಲ್ಲಿರುತ್ತದೆ. ಸುಮಾರು ೨೦ ಮಕ್ಕಳಲ್ಲಿ ೧೬ ಮಕ್ಕಳು ಆಗಮಿಸುತ್ತಾರೆ. ಮಕ್ಕಳ ಹಿತರಕ್ಷಣೆಗಾಗಿ ಸಿಡಿಪಿ ಇಲಾಖೆಗೆ ನೂತನ ಕಟ್ಟಡ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಲಾಗಿದೆ.
ಕೆ.ಆರ್.ಪಾರಿಜಾತ, ಅಂಗನಾಡಿ ಕಾರ್ಯಕರ್ತೆ

ಬೇಸಿಗೆ ಸಂದರ್ಭದಲ್ಲಿ ನೀರಿನ ಸಮಸ್ಯೆ ತಲೆದೂರುತ್ತದೆ. ಜತೆಗೆ ವಾರ್ಡ್ ೪ರಲ್ಲಿ ಕೆಲವು ಭಾಗದಲ್ಲಿ ತಡೆಗೋಡೆಗಳ ನಿರ್ಮಾಣ ಹಾಗೂ ರಸ್ತೆಗಳಿಗೆ ಮರು ಡಾಂಬರೀಕರಣ ಅವಶ್ಯಕತೆಯಿದೆ. ಬೀದಿದೀಪ ಸರಿಪಡಿಸಬೇಕಿದೆ.
ಅಬೂಬಕ್ಕರ್, ಅಜಾದ್ ನಗರ ನಿವಾಸಿ

೨೦೧೮ರ ಅವಧಿಯಲ್ಲಿ ಕೆಲಸಗಳು ಆಗಿದೆ. ಪ್ರಸ್ತುತ ಆಡಳಿತದಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ನನ್ನ ವಾರ್ಡ್‌ನಲ್ಲಿ ಕೆಲವು ರಸ್ತೆಗಳ ಅಭಿವೃದ್ಧಿ, ಚರಂಡಿ ನಿರ್ಮಾಣ ಬಾಕಿಯಿದೆ. ಇದನ್ನು ನಗರೋತ್ಥಾನ ೪ರಲ್ಲಿ ಸೇರಿಸಿಕೊಳ್ಳಲಾಗಿದೆ. ಇಲ್ಲಿನ ಮುಖ್ಯ ಸಮಸ್ಯೆ ಹಕ್ಕುಪತ್ರ. ಜನಪ್ರತಿನಿಧಿಗಳು ಕಾರ್ಯೋನ್ಮುಕರಾದರೇ ಈ ಕೆಲಸ ಸಾಧ್ಯ.
ಎಂ.ಕೆ.ಮನ್ಸೂರು ಆಲಿ, ಸದಸ್ಯರು, ೪ನೇ ವಾರ್ಡ್ ನಗರಸಭೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net