

ಕೊಳ್ಳೇಗಾಲ: ಪಟ್ಟಣದ ಕಬಿನಿ ಕಚೇರಿಯ ಆವರಣದಲ್ಲಿ ಮಂಗಳವಾರ ಗುಂಡಾಲ್ ಜಲಾಶಯದ ಅಚ್ಚುಕಟ್ಟು ರೈತರು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳ ಸಲಹಾ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎ.ಆರ್.ಕೃಷ್ಣಮೂರ್ತಿ ರೈತರ ಅಹವಾಲು ಮತ್ತು ಸಲಹೆಗಳನ್ನು ಸ್ವೀಕರಿಸಿದರು. ಗುಂಡಾಲ್ ಹಳೇ ಸ್ಥಿರ ಅಚ್ಚುಕಟ್ಟು ಪ್ರದೇಶ ಹಿತರಕ್ಷಣಾ ಸಮಿತಿ ಅಧ್ಯಕ್ಷ ದಶರತ್ ಮಾತನಾಡಿ, ಕೆರೆ ಒತ್ತುವರಿ, ನಾಲೆ ಮತ್ತು ಕೆರೆಗಳಲ್ಲಿ ಹೂಳು ತುಂಬಿರುವುದರಿಂದ ಕೆರೆಯಲ್ಲಿ ಹೆಚ್ಚು ನೀರು ಸಂಗ್ರಹವಾಗದೆ ಸಮಸ್ಯೆ ಉಂಟಾಗಿದೆ. ಮಳೆ ಕೊರತೆಯಿಂದ ರೈತ ಸಂಕಷ್ಟಕ್ಕೀಡಾಗಿದ್ದಾನೆ. ಆದ್ದರಿಂದ ಗುಂಡಾಲ್ ಜಲಾಶಯ ನೀರನ್ನು ಕೆರೆಗಳಿಗೆ ತುಂಬಿಸಬೇಕು. ಇದ್ದರಿಂದ ಜಾನುವಾರುಗಳಿಗೆ, ರೈತರಿಗೆ ಅನುಕೂಲವಾಗುತ್ತದೆ ಎಂದರು.
ಕಬಿನಿ ಎರಡನೇ ಹಂತ ಕಾಮಗಾರಿ ಅಪೂರ್ಣಗೊಂಡಿರುವುದರಿಂದ ಈ ಭಾಗದ ರೈತರಿಗೆ ಅನ್ಯಾಯವಾಗಿದೆ. ಗುಂಡಾಲ್ ಜಲಾಶಯದಲ್ಲಿರುವ ನೀರನ್ನು ಎಲ್ಲ ಕೆರೆಗಳು ಬಿಡಬೇಕು ಎಂದು ರೈತರು ಒಕ್ಕೊರಲಿನಿಂದ ಮನವಿ ಮಾಡಿದರು.
ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ವರುಣನ ಕೃಪೆ ಇದ್ದರೆ ಸಮಸ್ಯೆಗಳು ಬಗೆಹರಿಯುತ್ತದೆ. ನಾವೆಲ್ಲರೂ ದೇವರಲ್ಲಿ ಮಳೆಗಾಗಿ ಪ್ರಾರ್ಥಿಸೋಣ. ಇತ್ತೀಚೆಗೆ ನಡೆದ ಕಾಡಾ ಸಭೆಯಲ್ಲಿ ಕಬಿನಿ ನೀರನ್ನು ನಂಜನಗೂಡು ತಾಲೂಕಿಗೆ ಮಾತ್ರ ಬಿಡುವ ತೀರ್ಮಾನವಾಗಿತ್ತು. ಆದರೆ, ನಾನು ಕೊಳ್ಳೇಗಾಲ ಕೆರೆಗಳಿಗೆ ನೀರು ಬಿಡಲೇಬೇಕೆಂಬ ಪಟ್ಟು ಹಿಡಿದ್ದರಿಂದ ಈಗ ಅಲ್ಪಸ್ವಲ್ಪ ನೀರು ಕೆರೆಗಳಿಗೆ ನೀರು ಬರುತ್ತಿದೆ. ಈ ಹೋರಾಟವನ್ನು ಮುಂದುವರಿಸುತ್ತೇನೆ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿರುವ ನೀರಿನ ಸಮಸ್ಯೆಗಳು ಶಾಶ್ವತವಾಗಿ ಪರಿಹರಿಸುವ ಸುಲವಾಗಿ ಆಯಾ ಜಲಾಶಯಗಳ ವ್ಯಾಪ್ತಿಯಲ್ಲೇ ಸಭೆ ನಡೆಸಬೇಕಿದೆ. ಅಲ್ಲಿ ವಾಸ್ತವಾಂಶ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸಬೇಕಾಗಿದೆ. ಈ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿ ಶಾಶ್ವತ ಪರಿಹಾರಕ್ಕೆ ಹೋರಾಟ ಮಾಡುವುದಾಗಿ ಭರವಸೆ ನೀಡಿದರು.
ಕಬಿನಿ ಪ್ರಭಾರ ಇಇ ರಮೇಶ್, ಎಇಇ ಮಂಜುನಾಥಸ್ವಾಮಿ, ಎಇಇ ರಾಮಕೃಷ್ಣ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಂದರಮ್ಮ, ರೈತರಾದ ಮಧುವನಹಳ್ಳಿ ಬಸವರಾಜು, ದಶರಥ, ಕೃಷ್ಣರಾಜು, ಚಿನ್ನಸ್ವಾಮಿ ಮಾಳಿಗೆ, ನಟರಾಜು ಮಾಳಿಗೆ, ನರಸಿಂಹ, ಕಣ್ಣೂರು ಬಸವರಾಜಪ್ಪ, ಚೆಲುವಹಳ್ಳಿ ಮಲ್ಲಿಕಾರ್ಜುನಸ್ವಾಮಿ, ನಟೇಶ್, ಹಿಂದ್ವಾಡಿ ಚಿಕ್ಕಸಿದ್ದಯ್ಯ ಮತ್ತಿತರರಿದ್ದರು.