

ವಿಜಯಪುರ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಲ್ಲ ಶಾಸಕರು, ಕಾರ್ಯಕರ್ತರು ಹಾಗೂ ಮುಖಂಡರುಗಳು ಸಂಘಟಿತವಾಗಿ ಹೋರಾಟ ಮಾಡಿದ್ದಾರೆ. ಆದರೆ, ಪ್ರಯತ್ನ ವಿಫಲವಾಗಿದೆ. ಹೀಗಾಗಿ ಯಾರ ಮೇಲೂ ಆಪಾದನೆ ಇಲ್ಲ ಎಂದು ಕಾಂಗ್ರೆಸ್‌ನ ಪರಾಜಿತ ಅಭ್ಯರ್ಥಿ ರಾಜು ಆಲಗೂರ ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಗ್ಯಾರಂಟಿ ಯೋಜನೆಗಳು ಕೈಹಿಡಿಯುವ ನಿರೀಕ್ಷೆ ಇತ್ತು. ಆದರೆ, ನರೇಂದ್ರ ಮೋದಿ ಮತ್ತು ಹಿಂದುತ್ವದ ಅಲೆಯಿಂದಾಗಿ ಗೆಲುವಿಗೆ ಬೇಕಾದಷ್ಟು ಮತಗಳು ದೊರಕಲಿಲ್ಲ. ಆದರೂ ಆರು ಲಕ್ಷಕ್ಕೂ ಅಧಿಕ ಮತಗಳು ದೊರಕಿದ್ದು ಕಳಪೆ ಸಾಧಣೆ ಏನಲ್ಲ ಎಂದು ರಾಜು ಆಲಗೂರ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲ ಶಾಸಕರು ಪ್ರಾಮಾಣಿಕವಾಗಿ ಚುನಾವಣೆ ಮಾಡಿದ್ದಾರೆ. ಯಾರ ಮೇಲೂ ಆಪಾದನೆ ಮಾಡಲು ಹೋಗಲ್ಲ. ಎಲ್ಲರೂ ಚುನಾವಣೆ ಮಾಡಿದ್ದಾರೆ ಎಂದು ಭಾವಿಸುವೆ. ಎಲ್ಲರೂ ಒಟ್ಟಾಗಿಯೇ ನನಗೆ ಟಿಕೆಟ್ ಕೊಡಿಸಿದ್ದಾರೆ. ಹೀಗಾಗಿ ಎಲ್ಲರೂ ಚುನಾವಣೆ ಮಾಡಿದ್ದಾರೆ. ಸೋಲಿಗೆ ಹಲವು ಕಾರಣ ಇರಬಹುದು. ಆ ಬಗ್ಗೆ ಪರಮಾರ್ಶೆ ನಡೆಸಿ ಕೆಪಿಸಿಸಿಗೆ ವರದಿ ನೀಡುವೆ ಎಂದರು.
ಕಾಂಗ್ರೆಸ್‌ಗೆ ಇನ್ನೂ 50 ಸಾವಿರ ಮತಗಳು ಬರಬಹುದೆಂಬ ನಿರೀಕ್ಷೆ ಇತ್ತು. ಆದರೆ ಕೆಲವು ವಿಚಾರಗಳು ಸೋಲಿಗೆ ಕಾರಣವಾಗಿರಬಹುದು. ಆ ಬಗ್ಗೆ ಇಲ್ಲಿ ಪ್ರಸ್ತಾಪಿಸಲು ಹೋಗುವುದಿಲ್ಲ. ಒಟ್ಟಿನಲ್ಲಿ ಆರು ಲಕ್ಷಕ್ಕೂ ಅಧಿಕ ಮತ ನೀಡಿದ ಎಲ್ಲ ಮತದಾರ ಬಾಂಧವರಿಗೆ, ಕಾರ್ಯಕರ್ತರಿಗೆ, ಶಾಸಕರಿಗೆ ಕೃತಜ್ಞತೆ ಸಲ್ಲಿಸಲು ಬಯಸುವೆ. ಜೊತೆಗೆ ವಿಜೇತ ಬಿಜೆಪಿ ಅಭ್ಯರ್ಥಿಗೂ ಅಭಿನಂದನೆ ಸಲ್ಲಿಸುವುದಾಗಿ ಆಲಗೂರ ತಿಳಿಸಿದರು.
ಮುಖಂಡರಾದ ಅಬ್ದುಲ್‌ಹಮೀದ್ ಮುಶ್ರೀಫ್, ಡಾ.ಗಂಗಾಧರ ಸಂಬಣ್ಣಿ, ಎಸ್.ಎಂ. ಪಾಟೀಲ ಗಣಿಹಾರ, ಸೋಮನಾಥ ಕಳ್ಳಿಮನಿ, ಸಾಹೇಬಗೌಡ ಬಿರಾದಾರ, ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ ಮತ್ತಿತರರಿದ್ದರು.