ಸಂವಿಧಾನ ರಕ್ಷಣೆಗೆ ಹೋರಾಟ ಅಗತ್ಯ: ಲಕ್ಷ್ಮಿನಾರಾಯಣ ನಾಗವಾರ

hhhh
ವಿಜಯಪುರ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಹಿರಿಯ ಪತ್ರಕರ್ತ ಅನಿಲ ಹೊಸಮನಿ ಅವರು ಕನ್ನಡಕ್ಕೆ ಅನುವಾದಿಸಿರುವ ಡಾ. ಸವಿತಾ ಭೀಮರಾವ್ ಅಂಬೇಡ್ಕರ್ ಅವರ ಆತ್ಮಚರಿತ್ರೆ ‘ಡಾ.ಅಂಬೇಡ್ಕರ್ ಸಹವಾಸದಲ್ಲಿ’ ಕೃತಿ ಬಿಡುಗಡೆಗೊಳಿಸಲಾಯಿತು. ಡಿಎಸ್‌ಎಸ್ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ಭಂತೆ ಬೋಧಿಪ್ರಜ್ಞ, ಚಂದ್ರು ಚಕ್ರವರ್ತಿ, ಪ್ರಭು ಮೇಗಳಮನಿ, ಚೆನ್ನು ಕಟ್ಟಿಮನಿ, ಗುರುರಾಜ ಗುಡಿಮನಿ, ನಾಗೇಶ ಕಟ್ಟಿಮನಿ, ಚಂದ್ರಕಾಂತ ಸಿಂಗೆ ಇತರರಿದ್ದರು.
Published on

ವಿಜಯಪುರ : ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಅವುಗಳ ರಕ್ಷಣೆಗಾಗಿ ದಲಿತ ಸಂಘಟನೆಗಳ ಒಗ್ಗಟ್ಟಿನ ಹೋರಾಟದ ಅಗತ್ಯವಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ ಹೇಳಿದರು.

ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ದಲಿತ ಸಂಘರ್ಷ ಸಮಿತಿ, ಲಡಾಯಿ ಪ್ರಕಾಶನ ಸಂಯುಕ್ತಾಶ್ರಯದಲ್ಲಿ ಭಾನುವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪತ್ರಕರ್ತ ಅನಿಲ ಹೊಸಮನಿ ಅವರು ಕನ್ನಡಕ್ಕೆ ಅನುವಾದಿಸಿರುವ ಡಾ. ಸವಿತಾ ಭೀಮರಾವ್ ಅಂಬೇಡ್ಕರ್ ಅವರ ಆತ್ಮಚರಿತ್ರೆ ‘ಡಾ.ಅಂಬೇಡ್ಕರ್ ಸಹವಾಸದಲ್ಲಿ’ ಕೃತಿ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮನುವಾದಿ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಒಂದೊಂದಾಗಿ ಖಾಸಗಿಯವರಿಗೆ ಮಾರಾಟ ಮಾಡುವ ಮೂಲಕ ಹಂತಹಂತವಾಗಿ ಮೀಸಲಾತಿಯನ್ನು ರದ್ದುಗೊಳಿಸುತ್ತಿದ್ದಾರೆ. ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಮನುವಾದಿಗಳು ನಡೆಸಿರುವ ಈ ಕುತಂತ್ರವನ್ನು ತಡೆಬೇಕಾದರೆ ಹರಿದು ಹಂಚಿ ಹೋಗಿರುವ ದಲಿತ ಸಂಘಟನೆಗಳು ಒಂದೇ ವೇದಿಕೆಯಡಿಯಲ್ಲಿ ಬಂದು ಹೋರಾಟ ಮಾಡಬೇಕಿದೆ ಎಂದು ಹೇಳಿದರು.

ಮುಸಲ್ಮಾನರ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಹುನ್ನಾರ ನಡೆಯುತ್ತಿದೆ. ಆಸೆ ಆಮಿಷಗಳ ಮುಖಾಂತರ ದಲಿತ ನಾಯಕರ ದಿಕ್ಕುತಪ್ಪಿಸುವ ಕೆಲಸ ವ್ಯವಸ್ಥಿತವಾಗಿ ಜಾರಿಯಲ್ಲಿದೆ. ಮುಸಲ್ಮಾನರನ್ನು ಟಾರ್ಗೆಟ್ ಮಾಡುತ್ತಿರುವ ಸಂಘಪರಿವಾರದ ಮುಂದಿನ ಟಾರ್ಗೆಟ್ ದಲಿತರೇ ಆಗಿದ್ದಾರೆ. ಮನುವಾದಿಗಳ ಈ ಹುನ್ನಾರವನ್ನು ದಲಿತ, ಮುಸ್ಲಿಂ ಮುಖಂಡರು ಅರ್ಥಮಾಡಿಕೊಳ್ಳಬೇಕಿದೆ. ದಲಿತರು ಮತ್ತು ಮುಸಲ್ಮಾನರು ಒಂದಾಗಬೇಕಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರ ಎರಡನೇ ಪತ್ನಿ ಡಾ. ಸವಿತಾ ಅಂಬೇಡ್ಕರ್ ಅವರ ಕುರಿತಾಗಿ ಹಲವಾರು ರೀತಿಯ ಅಪಪ್ರಚಾರ ನಡೆದಿದೆ. ಅದಕ್ಕೆ ಉತ್ತರವಾಗಿ ಅವರು ತಮ್ಮ ಆತ್ಮಚರಿತ್ರೆಯನ್ನು ಬರೆದುಕೊಂಡಿದ್ದಾರೆ. ಅದನ್ನು ಕನ್ನಡದಲ್ಲಿ ತಂದಿರುವ ಹಿರಿಯ ಪತ್ರಕರ್ತ ಅನಿಲ ಹೊಸಮನಿ ಅವರು ಐತಿಹಾಸಿಕ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಭಂತೆ ಬೋಧಿಪ್ರಜ್ಞ ಶ್ರೀಗಳು ಸಾನ್ನಿಧ್ಯವಹಿಸಿದ್ದರು. ದಲಿತ ಸಂಘರ್ಷ ಸಮಿತಿ ಮುಖಂಡರಾದ ಚಂದ್ರು ಚಕ್ರವರ್ತಿ, ಪ್ರಭು ಮೇಗಳಮನಿ, ಚೆನ್ನು ಕಟ್ಟಿಮನಿ, ಗುರುರಾಜ ಗುಡಿಮನಿ, ನಾಗೇಶ ಕಟ್ಟಿಮನಿ, ಚಂದ್ರಕಾಂತ ಸಿಂಗೆ, ಹುಯೋಗಿ ತಳ್ಳೊಳ್ಳಿ, ಎಂ.ಬಿ. ಕಟ್ಟಿಮನಿ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net