ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಹೋರಾಟ ಅಗತ್ಯ

14 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ವಿಶ್ವಕರ್ಮ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಲು ಹೋರಾಟದ ಅವಶ್ಯಕತೆ ಇದೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಹೇಳಿದರು.
ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಎಸ್ಸೆಸ್ಸೆಲ್ಸಿ ಮತ್ತು ದ್ವೀತಿಯ ಪಿಯು ಪಾಸಾದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮೇಯರ್​ ರಾಮಣ್ಣ ಬಡಿಗೇರ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದವರಿಗೆ ಸಂವಿಧಾನ ಬದ್ಧ ಸೌಲಭ್ಯಗಳು ಲಭಿಸಿಲ್ಲ. ರಾಜಕೀಯ ಸ್ಥಾನಮಾನ ಪಡೆಯಲು ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ದೇಶದಲ್ಲಿ ವಿಶ್ವಕರ್ಮ ಸಮಾಜದ ಜನಸಂಖ್ಯೆ 10 ಕೋಟಿ ಇದ್ದರೆ, ಕರ್ನಾಟಕದಲ್ಲಿ 40 ಲಕ್ಷ ಇದೆ. ಬಹುತೇಕ ಹಳ್ಳಿಯಿಂದ ಬಂದ ಈ ಸಮಾಜ ದೇಶದ ಸಂಸ್ಕೃತಿಗೆ ಕೊಟ್ಟ ಕೊಡುಗೆ ಅಪಾರ. ಜಾತಿ, ಧರ್ಮ ನೋಡದೆ ದೇಶದ ಸಂಸ್ಕೃತಿ ಉಳಿಸಿದ್ದೇವೆ ಎಂದರು.
ಶಾಸಕ ಅರವಿಂದ ಬೆಲ್ಲದ ಮಾತನಾಡಿ, ವಿಶ್ವಕರ್ಮ ಸಮಾಜ ಇತರೆ ಸಮಾಜಗಳಿಗೆ ಮಾದರಿಯಾಗಿದೆ. ವಿಶ್ವ ಕರ್ಮರು ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತರಾಗಿದ್ದು, ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವುದರಿಂದ ಶೈಕ್ಷಣಿಕವಾಗಿ ಸಹ ಪ್ರಗತಿ ಸಾಧಿಸಬಹುದು. ಹೀಗಾಗಿ ಪಾಲಕರು ಮಕ್ಕಳ ಹೆಚ್ಚಿನ ಅಧ್ಯಯನಕ್ಕೆ ಶ್ರಮಿಸಬೇಕು ಎಂದರು.
ಮಹಾಸಭಾ ಜಿಲ್ಲಾಧ್ಯಕ್ಷ ಕಾಳಪ್ಪ ಬಡಿಗೇರ ಅಧ್ಯಕ್ಷತೆ ವಹಿದ್ದರು. ಶಾಸಕ ಎನ್​.ಎಚ್​. ಕೋನರಡ್ಡಿ, ಪಾಲಿಕೆ ಮೇಯರ್​ ರಾಮಣ್ಣ ಬಡಿಗೇರ, ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮಹಾಸಭಾ ಮುಖಂಡರಾದ ಶಿವಣ್ಣ ಬಡಿಗೇರ, ವಿಠ್ಠಲ ಕಮ್ಮಾರ, ಲೋಹಿತ್​ ವೈ, ವಸಂತ ಅರ್ಕಾಚಾರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net