ಅನ್ಯಾಯ ಸರಿಪಡಿಸದಿದ್ದರೆ ಹೋರಾಟ ಅನಿವಾರ್ಯ

29-HNL-1 protest
Published on

ಹಾನಗಲ್ಲ: ಗೋವಿನಜೋಳದ ಬೆಳೆ ಹಾನಿ ಸಮೀಕ್ಷೆ ಕೈಗೊಳ್ಳುವಲ್ಲಿ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಮೀನಮೇಷ ತೋರುತ್ತಿರುವುದರಿಂದ ರೈತರಿಗೆ ಸಮಸ್ಯೆ ಎದುರಾಗಿದೆ. ಮುಂಗಾರು ಆರಂಭದಿಂದಲೂ ಸತತ ಮಳೆ ಸುರಿದಿರುವುದು ಇಲಾಖೆಗಳಿಗೆ ಮಾಹಿತಿಯಿದ್ದರೂ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ವಿರಕ್ತಮಠದಿಂದ ಮಹಾತ್ಮ ಗಾಂಧಿ ವೃತ್ತದವರೆಗೆ 300ಕ್ಕೂ ಅಧಿಕ ಟ್ರ್ಯಾಕ್ಟರ್ ರ್ಯಾಲಿಯೊಂದಿಗೆ ಗುರುವಾರ ಪ್ರತಿಭಟನಾ ಮೆರವಣಿಗೆ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನಾದ್ಯಂತ ಸುರಿದ ಸತತ ಮಳೆಗೆ ಗೋವಿನಜೋಳ, ಸೋಯಾಬೀನ್, ಹತ್ತಿ ಸೇರಿ ಹಲವು ಬೆಳೆಗಳು ಹಾನಿಗೊಳಪಟ್ಟಿವೆ. ಇಲಾಖೆ ಸಿಬ್ಬಂದಿ ಗುಂಟೆವಾರು ಹಾನಿ ದಾಖಲಿಸುತ್ತಿದ್ದಾರೆ. ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಡಳಿತದ ವಿರುದ್ಧ ಹಾವೇರಿಯಲ್ಲಿ ಹೋರಾಟಕ್ಕಿಳಿಯುವುದು ಅನಿವಾರ್ಯವಾಗಲಿದೆ ಎಂದು ಕೆಂಚಳ್ಳೇರ ಎಚ್ಚರಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಹಾಗೂ ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ ಮಾತನಾಡಿ, ಸರ್ಕಾರ ಬೆಳೆಹಾನಿಯ ವಸ್ತುಸ್ಥಿತಿಯನ್ನು ಸಮರ್ಪಕವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅರಣ್ಯ ಪ್ರಾಣಿಗಳ ದಾಳಿಗೆ ಹಾನಿಯಾದ ಬೆಳೆಗಳಿಗೆ ಇಳುವರಿ ಮತ್ತು ಮಾರುಕಟ್ಟೆ ದರವನ್ನಾಧರಿಸಿ ಪರಿಹಾರ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು.

ರೈತಸಂಘದ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಎಚ್.ಎಚ್. ಮುಲ್ಲಾ, ಮಹ್ಮದಗೌಸ್ ಪಾಟೀಲ, ಗೌರವಾಧ್ಯಕ್ಷ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ರಾಜೀವ ದಾನಪ್ಪನವರ ಮಾತನಾಡಿದರು. ಮಹೇಶ ವಿರೂಪಣ್ಣನವರ, ಮಹಲಿಂಗಪ್ಪ ಅಕ್ಕಿವಳ್ಳಿ, ವಾಸುದೇವ ಕಮಾಟಿ, ಶ್ರೀಕಾಂತ ದುಂಡಣ್ಣನವರ, ಸೋಮಣ್ಣ ಜಡೆಗೊಂಡರ, ಷಣ್ಮುಖ ಅಂದಲಗಿ, ಅಜ್ಜನಗೌಡ ಕರೆಗೌಡರ, ಮಲ್ಲನಗೌಡ ಮತ್ತಿಗಟ್ಟಿ, ಶಂಭುಗೌಡ ಪಾಟೀಲ, ಶ್ರೀಧರ ಮಲಗುಂದ, ನಿಂಗನಗೌಡ ಪಾಟೀಲ, ರವಿ ಸಂಕಪಾಳೆ, ಮಂಜು ತೆಲಗಡ್ಡಿ, ರುದ್ರಗೌಡ ಪಾಟೀಲ, ಮಂಜು ಪವಾರ, ಶಿವಪ್ಪ ಹುಲ್ಲಮನಿ, ವೀರಭದ್ರಗೌಡ ಪಾಟೀಲ, ಮೂಕಯ್ಯ ಗುರುಲಿಂಗಮ್ಮನವರ, ಮಾಲತೇಶ ಕಲ್ಲಿಕರೆಣ್ಣನವರ, ಯಶೋಧರ ವೀರಾಪುರ, ಗಂಗಾಧರ ಕೊಪ್ಪದ, ರಿಯಾಜಅಹ್ಮದ ಸವಣೂರ, ಇತರರಿದ್ದರು.

ಬೆಳೆ ಹಾನಿ, ಪರಿಹಾರ ವಿಳಂಬದ ಸಮಸ್ಯೆಗಳಿಗೆ ಮೇಲಧಿಕಾರಿಗಳೊಂದಿಗೆ ರ್ಚಚಿಸಿದ್ದೇವೆ. ಬೆಳೆ ಹಾನಿಯಾದ ಕ್ಷೇತ್ರಗಳ ಸಂಪೂರ್ಣ ಸಮೀಕ್ಷೆ ಕೈಗೊಳ್ಳುವಂತೆ ಸೂಚಿಸಿದ್ದಾರೆ. ರೈತರು ಆತಂಕಪಡುವ ಅಗತ್ಯವಿಲ್ಲ. ಹಿಂದಿನ ಕೆಲವು ಪರಿಹಾರಗಳು ತಾಂತ್ರಿಕ ಸಮಸ್ಯೆಗಳಿಂದ ನನೆಗುದಿಗೆ ಬಿದ್ದಿವೆ. ದಾಖಲೆಗಳನ್ನು ಪರಿಶೀಲಿಸಿ, ಇತ್ಯರ್ಥಪಡಿಸಲಾಗುವುದು. | ಎಸ್. ರೇಣುಕಮ್ಮ ತಹಸೀಲ್ದಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net