ನೀರು ಪೂರೈಕೆಯಲ್ಲಿ ಲೋಪವಾದಲ್ಲಿ ಹೋರಾಟ

h.d.revanna
ಎಚ್.ಡಿ.ರೇವಣ್ಣ
Published on

ಅರಸೀಕೆರೆ: ಜನ-ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವ ಹೊಣೆಗಾರಿಕೆ ಸರ್ಕಾರ ಮತ್ತು ಜಿಲ್ಲಾಡಳಿತ ಮೇಲಿದ್ದು, ಲೋಪ

ಕಂಡು ಬಂದಲ್ಲಿ ಬೀದಿಗಳಿದು ಹೋರಾಟ ನಡೆಸಲು ಹಿಂದೇಟು ಹಾಕುವುದಿಲ್ಲ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಗುಡುಗಿದರು.
ಬೇಸಿಗೆ ಬಿಸಿಲಿನ ಝಳ ದಿನದಿಂದ ದಿನಕ್ಕೆ ವಿಪರೀತವಾಗುತ್ತಿದ್ದು, ಎಲ್ಲೆಡೆ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಇದರ ನಡುವೆ ಸೆಸ್ಕ್ ಅಧಿಕಾರಿಗಳು ನಿತ್ಯ ಕೇವಲ ಒಂದೆರಡು ಗಂಟೆ ತ್ರೀ ಫೇಸ್ ವಿದ್ಯುತ್ ನೀಡುತ್ತಿದ್ದು, ಅನ್ನದಾತನಿಗೆ ಬೆಳೆ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಆದ್ದರಿಂದ ಸರ್ಕಾರ ಬಡವರ ನೆರವಿಗೆ ಧಾವಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ಸರ್ಕಾರದ ಗ್ಯಾರಂಟಿ ಯೋಜನೆಯ ಫಲ ಏನೆಂಬುದು ಜನರಿಗೆ ಈಗ ಮನವರಿಕೆಯಾಗುತ್ತಿದೆ. ತ್ರೀ ಫೇಸ್ ವಿದ್ಯುತ್ ಪೂರೈಸುವ ಸಮಯ ನಿಗದಿ ಕುರಿತು ಪ್ರಕಟಣೆ ಹೊರಡಿಸಬೇಕು. ಬೋರ್‌ವೆಲ್‌ಗಳಿಗೆ ವಿದ್ಯುತ್ ಪರಿವರ್ತಕ ಪಡೆಯಲು ಇಪ್ಪತ್ತು ಸಾವಿರ ರೈತರು ಹಣ ಪಾವತಿಸಿದ್ದು, ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಈ ಬಗ್ಗೆ ಕ್ರಮ ವಹಿಸಿಬೇಕು ಎಂದು ಆಗ್ರಹಿಸಿದರು.


ಜಿಲ್ಲಾಧಿಕಾರಿಗಳು ಸರ್ಕಾರಿ ಕಾರ್ಯಕ್ರಮ ಆಯೋಜಿಸಲು ತೋರಿದ ಉತ್ಸಾಹವನ್ನು ಕುಡಿಯುವ ನೀರು ಮತ್ತು ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡಲು ತೋರದಿದ್ದಲ್ಲಿ ಜನರ ಜತೆ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎನ್ನುವ ಉದ್ದೇಶದಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬಿಜೆಪಿ ಬೆಂಬಲಿಸಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ತಮ್ಮ ಅವಧಿಯಲ್ಲಿ ಜಿಲ್ಲೆಗೆ ಹತ್ತು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ತಂದಿದ್ದಾರೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತಾಲೂಕಿಗೆ ಇಂಜಿನಿಯರಿಂಗ್, ಪದವಿ, ಪದವಿ ಪೂರ್ವ ಕಾಲೇಜು ಹಾಗೂ ನೂರಾರು ಹೈಸ್ಕೂಲ್ ನೀಡಿದ್ದಾರೆ. ಈ ಎಲ್ಲ ಅಭಿವೃದ್ಧಿ ವಿಷಯಗಳನ್ನು ಜನರ ಮುಂದಿಟ್ಟು ಲೋಕಸಭಾ ಚುನಾವಣೆಯಲ್ಲಿ ಮತಯಾಚನೆ ಮಾಡಲಿದ್ದೇವೆ ಎಂದರು.

ಜೆಡಿಎಸ್‌ನ ತಾಲೂಕು ಅಧ್ಯಕ್ಷ ಚಂದ್ರಶೇಖರ್, ನಗರಸಭೆ ನಿಕಟಪೂರ್ವ ಅಧ್ಯಕ್ಷ ಸಿ.ಗಿರೀಶ್, ಸದಸ್ಯರಾದ ಭಾಸ್ಕರ್, ಈಶ್ವರಪ್ಪ, ಜಾಕಿರ್ ಹುಸೇನ್, ಮೇಲುಗಿರಿಗೌಡ, ಹರ್ಷವರ್ಧನ್‌ರಾಜ್, ತಾಪಂ ಮಾಜಿ ಸದಸ್ಯ ಬಸವಲಿಂಗಪ್ಪ, ಮುಖಂಡರಾದ ಬಿ.ಜಿ.ನಿರಂಜನ್, ಕಡಕುಂದಿ ಕುಮಾರ್, ಲಾಳನಕೆರೆ ಯೋಗೀಶ್, ಗಣೇಶ್, ಮಂಜುನಾಥ್, ಸತೀಶ್, ಬಾಲರಾಜ್, ಬೋರನಕೊಪ್ಪಲು ಸ್ವಾಮಿ, ಸತೀಶ್, ಬಾಲರಾಜ್ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net