

ಬ್ಯಾಡಗಿ: ಪಟ್ಟಣದಲ್ಲಿ ಹಾದು ಹೋಗಿರುವ ಗಜೇಂದ್ರಗಡ-ಸೊರಬ ಹೆದ್ದಾರಿ ವಿಸ್ತರಣೆಯನ್ನು 20 ಮೀಟರ್‌ಗಿಂತ ಕಡಿಮೆ ಮಾಡಿದರೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಲಾಗುವುದು ಎಂದು ರಸ್ತೆ ಅಗಲೀಕರಣ ಹೋರಾಟ ಸಮಿತಿ ಅಧ್ಯಕ್ಷ ಸುರೇಶ ಚಲವಾದಿ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ವಿಸ್ತರಣೆಗಾಗಿ ಕಳೆದ 15 ವರ್ಷಗಳಿಂದ ಹೋರಾಟ ಸಮಿತಿ ಹಾಗೂ ಸಂಘ, ಸಂಸ್ಥೆಗಳು ಹೋರಾಟ ನಡೆಸುತ್ತಿವೆ. ಆದರೆ, ಜೂ. 6ರಂದು ಶಾಸಕ ಬಸವರಾಜ ಶಿವಣ್ಣನವರ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲರ ನೇತೃತ್ವದಲ್ಲಿ ರಸ್ತೆ ಜಾಗದ ಮಾಲೀಕರ ಸಭೆ ಏರ್ಪಡಿಸಿರುವುದು ಕಾಯ್ದೆಬದ್ಧವಲ್ಲ. ಭೂಸ್ವಾಧೀನ ಪ್ರಕ್ರಿಯೆಗೆ ಸಭೆ ನಡೆಸಬೇಕಿರುವುದು ಉಪವಿಭಾಗಾಧಿಕಾರಿಗಳೇ ಹೊರತು, ಸ್ಥಳೀಯ ಅಧಿಕಾರಿಗಳಲ್ಲ. ಆಸ್ತಿ ಮಾಲೀಕರಿಗೆ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಅಳತೆ ಕಡಿಮೆ ಮಾಡಲಾಗುತ್ತಿದೆ. ಮೂಲ ಅಳತೆಗಿಂತ ಒಂದಿಂಚು ಕಡಿಮೆಮಾಡಲು ಬಿಡುವುದಿಲ್ಲ. ನಿರ್ಲಕ್ಷ್ಯ ಮಾಡಿದರೆ ನ್ಯಾಯಾಲಯ ಮೊರೆ ಹೋಗಲಾಗುವುದು ಎಂದರು.
ಸಭೆಯಲ್ಲಿ ಪಾಲ್ಗೊಳ್ಳಲು ರಸ್ತೆ ಹೋರಾಟ ಸಮಿತಿಯವರಿಗೆ ಆಹ್ವಾನ ನೀಡಿಲ್ಲ. ಹೀಗಾಗಿ ಜೂ. 6ರ ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ. ನ್ಯಾಯಾಲಯ ಸೂಚಿಸಿದ ನಿಯಮಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ ಎಂದು ದೂರಿದ ಅವರು, ಮಾಲೀಕರ ಸಭೆ ಬದಲಾಗಿ, ನೋಟಿಫಿಕೇಷನ್ ಹೊರಡಿಸಲಿ. ಸಭೆಯಲ್ಲಿ ಹೋರಾಟಗಾರರಿಗೆ, ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರು ಪಾಲ್ಗೊಳ್ಳಲು ಅವಕಾಶ ನೀಡಿಲ್ಲ ಏಕೆ? ಎಂದು ಪ್ರಶ್ನಿಸಿದರು.
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವಧಿಯಲ್ಲಿ 28 ಅಡಿ ರಸ್ತೆ ನಿರ್ಮಿಸುವ ಪ್ರಯತ್ನ ನಡೆದಿತ್ತು. ಆಗ ಹೋರಾಟ ಸಮೀತಿಯವರು ವಿರೋಧಿಸಿದ್ದು, 33 ಅಡಿ ರಸ್ತೆೆ ( ಒಟ್ಟು 20 ಮೀಟರ್ ರಸ್ತೆ ) ನಿರ್ಮಿಸಬೇಕೆಂದು ಆಗ್ರಹಿಸಿದ್ದೇವೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಹಾಗೂ ಇತರ ಕುರಿತು ಯಾವುದೇ ಪ್ರಕರಣವಿಲ್ಲ. ಹಿಂದೆಯೂ ಲೋಕೋಪಯೋಗಿ ಅಧಿಕಾರಿಗಳು ಮಾಡಿದ ತಪ್ಪಿನಿಂದ ವಿಳಂಬವಾಗಿದೆ. ಸ್ಥಳೀಯ ಅಧಿಕಾರಿಗಳು ಕಾನೂನುಬದ್ಧವಾಗಿ ತೆರವಿಗೆ ಮಂದಾಗಿ, ಭೂಸ್ವಾಧೀನ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದರು.