

ಶಿವಮೊಗ್ಗ: ರಾಜ್ಯ ಸರ್ಕಾರ ಗ್ಯಾರಂಟಿಯಲ್ಲಿ ಮುಳುಗಿದೆ. ಹೀಗಾಗಿ ಉಳಿದ ಕಾಮಗಾರಿಗಳು ಸ್ಥಗಿತಗೊಂಡಿವೆ. ಮುಖ್ಯವಾಗಿ ಜಿಲ್ಲೆಯಲ್ಲಿ ವಸತಿ ಯೋಜನೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಸರ್ಕಾರ ವಸತಿ ಯೋಜನೆ ಕಾಮಗಾರಿ ಆರಂಭಿಸದೆ ಇದ್ದರೆ ಹೋರಾಟ ರೂಪಿಸಲಾಗುವುದು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಎಚ್ಚರಿಕೆ ನೀಡಿದರು.
ಶಿವಮೊಗ್ಗದ ಗೋವಿಂದಾಪುರ, ಗೋಪಶೆಟ್ಟಿಕೊಪ್ಪದಲ್ಲಿ ಬಹುತೇಕ ಮನೆಗಳನ್ನು ಬಿಜೆಪಿ ಸರ್ಕಾರದ ಅವಧಿಯಲ್ಲೇ ನಿರ್ಮಾಣ ಮಾಡಲಾಗಿತ್ತು. ಈಗ ಕೆಲವು ಮನೆಗಳ ನಿರ್ಮಾಣ ಕಾರ್ಯ ಬಾಕಿ ಉಳಿದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಕಾಮಗಾರಿಗೆ ಗ್ರಹಣ ಹಿಡಿದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್ ಮಾತನಾಡಿ, ಶಿಕಾರಿಪುರದಲ್ಲಿ ಯಡಿಯೂರಪ್ಪ ಹಾಗೂ ರಾಘವೇಂದ್ರ ಅವರ ಆಸಕ್ತಿಯಿಂದ, ಸಾಗರದಲ್ಲಿ ಹರತಾಳು ಹಾಲಪ್ಪ ಅವರ ದೂರದೃಷ್ಟಿ ಪರಿಣಾಮ ವಸತಿ ಯೋಜನೆಗಳಿಗೆ ವೇಗ ನೀಡಲಾಗಿತ್ತು. ಈಗ ವಿವಿಧ ಹಂತದಲ್ಲಿ ಕಾಮಗಾರಿ ಸ್ಥಗಿತಗೊಂಡಿದೆ. ಎಲ್ಲ ತಾಲೂಕುಗಳಿಂದಲೂ ವರದಿ ತರಿಸಿಕೊಂಡು ಅ.5ರೊಳಗೆ ಪ್ರಮುಖರ ಸಭೆ ನಡೆಸಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಯೋಜನೆ ಸಿದ್ಧಪಡಿಸಲಾಗುವುದು ಎಂದರು.
ಶಾಸಕ ಎಸ್.ಎನ್.ಚನ್ನಬಸ್ಪಪ, ನಗರಾಧ್ಯಕ್ಷ ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರಾಜ್, ನಗರ ಪಾಲಿಕೆ ಸದಸ್ಯರಾದ ಎಸ್.ಜ್ಞಾನೇಶ್ವರ್, ಇ.ವಿಶ್ವಾಸ್, ಮಾಜಿ ಸದಸ್ಯ ಡಿ.ಮೋಹನ್ ರೆಡ್ಡಿ, ಪ್ರಮುಖರಾದ ಎಂ.ಜಿ.ಬಾಲು, ಕೆ.ವಿ.ಅಣ್ಣಪ್ಪ ಇತರರಿದ್ದರು.