ಬೆಳವಟಿಗಿ ಫಾರ್ಮ್ ಸ್ಥಳಾಂತರಿಸಿದರೆ ಹೋರಾಟ

KONARADDI
Published on

ನವಲಗುಂದ: ತಾಲೂಕಿನ ವಿಧಾನ ಸಭಾ ಕ್ಷೇತ್ರದ ಕೃಷಿ ಸಂಶೋಧನಾ ಕೇಂದ್ರವನ್ನು (ಬೆಳವಟಿಗಿ ಫಾರ್ಮ್) ಸ್ಥಳಾಂತರಕ್ಕೆ ಮುಂದಾದರೆ ರೈತರರೊಂದಿಗೆ ಸೇರಿ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಎಚ್ಚರಿಕೆ ನೀಡಿದರು.
ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ತ್ರೈಮಾಸಿಕ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇಲ್ಲಿನ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಕೃಷಿ ನೀರು ನಿರ್ವಹಣೆ ಕೇಂದ್ರವನ್ನು ಸ್ಪಾಪಿಸಲಾಗಿದೆ. ಅದನ್ನು ಸ್ಥಳಾಂತರ ಗೊಳಿಸಿದರೆ ನಮ್ಮ ಭಾಗದ ರೈತರಿಗೆ ಸಮಸ್ಯೆ ಎದುರಾಗಲಿದೆ ಎಂದು ವಿವರಿಸಿದರು.
ಅಧಿಕಾರಿಗಳು ಕೆಡಿಪಿ ಸಭೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದಲ್ಲಿ ನಿಯಮಾನುಸಾರ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದರು.
ರಸ್ತೆ ಕಾಮಗಾರಿ ಹಾಗೂ ರೈತರಿಗೆ ಬಿತ್ತನೆ ಬೀಜ, ಅವಳಿ ಪಟ್ಟಣವೂ ಸೇರಿದಂತೆ ಎಲ್ಲ ಗ್ರಾಮೀಣ ಪ್ರದೇಶ ಬಡವರಿಗೂ ಮನೆ ಹಂಚಿಕೆ ವಿಚಾರದಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ದೂರುಗಳು ಬರದಂತೆ ಕೆಲಸ ಮಾಡಿ ಎಂದು ಸೂಚಿಸಿದರು.
ಶಿಕ್ಷಣ, ಅರೋಗ್ಯ, ಪಶು ಇಲಾಖೆ ಸೇರಿದಂತೆ ಯಾವ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆಯಿದೆ ಎಂಬುದನ್ನು ತಿಳಿಸಬೇಕು. ಜತೆಗೆ ಪ್ರತಿ ಇಲಾಖೆಗಳಲ್ಲೂ ಇರುವ ಹುದ್ದೆಗಳೆಷ್ಟು, ಕಾರ್ಯ ನಿರ್ವಹಿಸುತ್ತಿರುವವರು ಎಷ್ಟು ಸಿಬ್ಬಂದಿ ಎಂಬ ಮಾಹಿತಿಯನ್ನು ಪಟ್ಟಿ ಮಾಡಿ ನನಗೆ ಒದಗಿಸಬೇಕೆಂದರು.
ನೀರಿನ ಸಮಸ್ಯೆ ಆಗದಿರಲಿ: ಕ್ಷೇತ್ರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ನಾನು ಅಧಿಕಾರಿಗಳಿಗೆ ಇಂದೇ ತಿಳಿಸುತ್ತೇನೆ. ನೀರು ಪೂರೈಸುವ ವಿಚಾರದಲ್ಲಿ ನಿಯಮಗಳೇನೇ ಇದ್ದರೂ ಅದನ್ನು ನಂತರ ನೋಡೋಣ. ಆದರೆ ಎಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡು ಬರುತ್ತದೆಯೋ ಅಲ್ಲಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಪಿಡಿಒಗಳಿಗೆ ಇಂದೇ ನೋಟಿಸ್ ನೀಡಿ. ಸಾರ್ವಜನಿಕರಿಂದ ಯಾವುದೇ ದೂರು ಬರದಂತೆ ಕ್ರಮ ವಹಿಸಿ ಎಂದು ತಾ ಪಂ ಇಒ ಅವರಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಧಾರವಾಡ ಉಪವಿಭಾಗಾಧಿಕಾರಿ ಅಶೋಕ ತೆಲಿ, ತಹಸೀಲ್ದಾರ ಪ್ರಕಾಶ ಹೊಳೆಪ್ಪಗೋಳ ,ಅಣ್ಣಿಗೇರಿ ತಹಸೀಲ್ದಾರ್ ಅಶೋಕ ಮಠದ, ನವಲಗುಂದ ಇಒ ಭಾಗ್ಯಶ್ರೀ ಜಹಗೀರದಾರ, ಅಣ್ಣಿಗೇರಿ ಇಒ ಚಂದ್ರಶೇಖರ ಕುರ್ತಕೋಟಿ , ಬಿಇಒ ಶಿವಾನಂದ ಮಲ್ಲಾಡ ಮತ್ತಿತರು ಇದ್ದರು.
ಬೀಗತನ ಮಾಡಲು ಹೊರಟಿಲ್ಲ
ಕಳಪೆ ಕಾಮಗಾರಿಗಳ ಕುರಿತು ನಿಮ್ಮ ಇಲಾಖೆಯ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಜಿ.ಪಂ.ಕಾರ್ಯನಿರ್ವಾಹಕ ಅಧಿಕಾರಿ ಎಂ.ಜೆ. ಸಿಂಧೆ ಅವರನ್ನು ಶಾಸಕರು ಪ್ರಶ್ನಿಸಿದರು. ಅದಕ್ಕೆ ಉತ್ತರ ನೀಡಿದ ಎಂ.ಜೆ. ಸಿಂಧೆ ಗುತ್ತಿಗೆದಾರರನ್ನು ಕರೆದು ಮಿಟಿಂಗ್ ಮಾಡಿ ನಿಮಗೆ ಹೇಳುತ್ತೇನೆ ಎಂದರು. ಇದಕ್ಕೆ ಕುಪಿತಗೊಂಡ ಶಾಸಕರು, ಅವರ ಜತೆ ನಾನೇನು ಬೀಗತನ ಮಾಡಲು ಹೊರಟಿಲ್ಲ. ಸರಿಯಾರಿ ಕೆಲಸ ಮಾಡುವುದಿದ್ದರೆ ಮಾಡಲಿ ಇಲ್ಲವಾದರೆ ಅವರಿಗೆ ಗೆಟ್‌ಔಟ್ ಹೇಳಿ ಎಂದರು.
ಗೊಂದಲಕ್ಕೆ ಕಾರಣವಾದ ಸಾರ್ವಜನಿಕರ ಮಾತು
ಕೆಡಿಪಿ ಸಭೆಯಲ್ಲಿ ಸಾರ್ವಜನಿಕರಿಗೂ ಮಾತನಾಡಲು ಅವಕಾಶ ನೀಡಿದ್ದರಿಂದ ಅಧಿಕಾರಿಗಳು ತಮ್ಮ ಇಲಾಖೆ ಪ್ರಗತಿ ಕುರಿತು ವಿವರಿಸುತ್ತಿರುವ ವೇಳೆ ಮಧ್ಯ ಪ್ರವೇಶಿಸುವ ಸಾರ್ವಜನಿಕರಿಂದ ಅಧಿಕಾರಿಗಳಿಗೆ ಮಜುಗರ ಉಂಟಾಯಿತು. ಇದು ಕೆಡಿಪಿ ಸಭೆಯೋ ಅಥವಾ ಸಾರ್ವಜನಿಕ ಸಭೆಯೋ ಎಂಬ ಗೊಂದಲ ಮೂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net