

ಲೋಕೇಶ್ ಎಂ. ಐಹೊಳೆ ಜಗಳೂರು
ಕಳೆದ ಇಪ್ಪತ್ತು ದಿನಗಳಿಂದ ಬಾರದ ಕುಡಿಯುವ ನೀರು, ಹಣ ಕೊಟ್ಟು ಟ್ಯಾಂಕರ್ ನೀರಿನ ಮೊರೆ ಹೋದ ಗ್ರಾಮಸ್ಥರು, ಮೋಟರ್ ಪಂಪ್ಸೆಟ್ ದುರಸ್ತಿ ಮಾಡದ ಅಧಿಕಾರಿಗಳು, ನೀರಿಗಾಗಿ ಕಾಯುತ್ತ ಕೆಲಸ ಬಿಟ್ಟು ಮನೆಯಲ್ಲಿ ಕುಳಿತ ಮಹಿಳೆಯರು, ಗ್ರಾಮಕ್ಕೆ ಭೇಟಿ ನೀಡದ ಅಭಿವೃದ್ಧಿ ಅಧಿಕಾರಿ..!
ಜಗಳೂರು ಪಟ್ಟಣದಿಂದ ಕೂಗಳತೆ ದೂರದ ಹನುಮಂತಾಪುರ ಗ್ರಾಪಂ ವ್ಯಾಪ್ತಿಯ ಗೊಲ್ಲರಹಟ್ಟಿಯ ಸ್ಥಿತಿ ಇದು. ಸುಮಾರು 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮ 4 ಮಂದಿ ಗ್ರಾಪಂ ಸದಸ್ಯರನ್ನು ಹೊಂದಿದೆ.
ಇಪ್ಪತ್ತು ದಿನಗಳಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಐದಾರು ಕೊಳವೆ ಬಾವಿಗಳಿದ್ದರೂ ಎಲ್ಲವೂ ದುಸ್ಥಿತಿಯಲ್ಲಿವೆ. ಈ ಬಗ್ಗೆ ಗ್ರಾಪಂ ಅಧಿಕಾರಿ, ಸದಸ್ಯರ ಗಮನಕ್ಕೂ ತಂದರೂ ಪ್ರಯೋಜನವಾಗಿಲ್ಲ. ನಮ್ಮಲ್ಲಿ ಹಣವಿಲ್ಲ, ಅಧಿಕಾರಿಗಳಿಲ್ಲವೆಂದು ನೆಪ ಹೇಳುತ್ತ ದಿನಗಳನ್ನು ದೂಡುತ್ತಿದ್ದಾರೆ. ಮೂಲ ಸೌಲಭ್ಯಗಳಲ್ಲಿ ಒಂದಾದ ಕುಡಿಯುವ ನೀರನ್ನು ಕೊಡಲು ಸಾಧ್ಯವಾಗಿಲ್ಲ. ಜನರು ಹೇಗೆ ಜೀವಿಸಬೇಕು ಎಂದು ಮಹಿಳೆಯರು ಹಿಡಿಶಾಪ ಹಾಕುತ್ತಿದ್ದಾರೆ.
ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ ಮೂಲಸವಲತ್ತು ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ. ಅಧಿಕಾರಿಗಳು ಸಭೆ, ಸಮಾರಂಭ, ವಿಸಿ ಎಂಬ ಕುಂಟು ನೆಪ ಹೇಳಿಕೊಂಡು ಓಡಾಡುತ್ತಾರೆ. ಇನ್ನು ಚುನಾಯಿತರೂ ಗಮನಹರಿಸುತ್ತಿಲ್ಲ. ಕುಡಿಯುವ ನೀರಿಗಾಗಿ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಹೊಲದಲ್ಲಿರುವ ಕೊಳವೆಬಾವಿಗಳಿಂದ ನೀರು ಸಂಗ್ರಹಿಸುತ್ತಿದ್ದೇವೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.
ಅಧಿಕಾರಿಗಳ ವೈಫಲ್ಯ: ತಾಲೂಕಿನಲ್ಲಿ ಕಳೆದ ಮುಂಗಾರು- ಹಿಂಗಾರು ಮಳೆಯ ಜತೆಗೆ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಬಹುತೇಕ ಕೆರೆಗಳು, ಗೋಕಟ್ಟೆ, ಚೆಕ್ ಡ್ಯಾಂಗಳಲ್ಲಿ ನೀರು ಸಂಗ್ರಹವಾಗಿ ಅಂತರ್ಜಲ ಅಭಿವೃದ್ಧಿಯಿಂದ ಈ ಬಾರಿ ಬೇಸಿಗೆಯಲ್ಲಿ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿಲ್ಲ. ಆದರೆ ಈಗ ಮಳೆ ಆರಂಭವಾಗಿದ್ದರೂ ಗೊಲ್ಲರಹಟ್ಟಿಯಲ್ಲಿ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದಾರೆ. ಆದರೆ ಒಮ್ಮೆಯೂ ಗ್ರಾಪಂ ಅಧಿಕಾರಿಗಳು ಭೇಟಿ ನೀಡಿ ಸಮಸ್ಯೆ ಆಲಿಸಿಲ್ಲ ಎಂದು ಗ್ರಾಮಸ್ಥರಾದ ಹರೀಶ್, ವೆಂಕಟೇಶ್, ಪರಶುರಾಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರಿಗಾಗಿ ಕೂಲಿ ಕೆಲಸಕ್ಕೆ ಹೋಗಲ್ಲ: ಗ್ರಾಮದಲ್ಲಿ ತರಗಾರರು, ಆಟೋ ಚಾಲಕರು, ಕೂಲಿಕಾರ್ವಿುಕರೇ ಹೆಚ್ಚಿದ್ದಾರೆ. ಪ್ರತಿಯೊಬ್ಬರೂ ಬೀದಿ ನಲ್ಲಿಗಳನ್ನು ಅವಲಂಬಿಸಿದ್ದಾರೆ. ಒಂದೊಂದು ಕುಟುಂಬದಲ್ಲಿ ಹತ್ತಾರು ಮಂದಿ ಇರುವುದರಿಂದ ಸ್ನಾನ, ಬಟ್ಟೆ ತೊಳೆಯಲು ಸಾಕಷ್ಟು ನೀರು ಬೇಕಾಗುತ್ತದೆ. ಮಹಿಳೆಯರು ತಮ್ಮ ನಿತ್ಯದ ಕೂಲಿ ಕೆಲಸವನ್ನು ಬಿಟ್ಟು ನೀರಿಗಾಗಿ ಕಾಯುವ ಪರಿಸ್ಥಿತಿಯುಂಟಾಗಿದೆ.
ಮನೆಗಳಲ್ಲಿ ನೀರು ಇಲ್ಲದಿದ್ದರೆ ಜೀವನ ನಡೆಸುವುದು ತುಂಬ ಕಷ್ಟವಾಗುತ್ತದೆ. ನಮ್ಮ ಮನೆಯಲ್ಲಿ ಎಲ್ಲರೂ ವಯಸ್ಸಾದವರೇ. ದೂರ ಹೋಗಿ ನೀರು ತರಲು ಆಗುವುದಿಲ್ಲ. ಅಧಿಕಾರಿಗಳು ಮಾನವೀಯತೆಯಿಂದ ಜನರ ಕಷ್ಟಕ್ಕೆ ಸ್ಪಂದಿಸಬೇಕು. | ಶಾರದಮ್ಮ, ನಿವಾಸಿ ಗೊಲ್ಲರಹಟ್ಟಿ ಗ್ರಾಮದಲ್ಲಿ ನಾಲ್ಕು ಕೊಳವೆಬಾವಿಗಳು ಸುಟ್ಟಿದ್ದರಿಂದ ಈಗಾಗಲೇ ಎರಡು ಬೋರ್ಗಳನ್ನು ಸರಿಪಡಿಸಿ ನೀರು ಪೂರೈಕೆಗೆ ಕ್ರಮಕೈಗೊಳ್ಳಲಾಗಿದೆ. ಎರಡು ದಿನಗಳಲ್ಲಿ ಎಲ್ಲ ಸರಿಯಾಗಲಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದೇನೆ. | ಕೆಂಚಪ್ಪ, ತಾಪಂ ಇಒ
ಚಿತ್ರ-2ಜೆಎಲ್ಆರ್ ವಿಶೇಷ ವರದಿ ಮೇ.23
ಜಗಳೂರು ಗೊಲ್ಲರಹಟ್ಟಿ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗಾಗಿ ಗ್ರಾಮಸ್ಥರು ಒತ್ತಾಯಿಸಿದರು.