

ಚಿಕ್ಕಮಗಳೂರು: ನಾಡು,ನುಡಿ ನೆಲ,ಜಲ ಹಾಗೂ ರೈತರ ಪರವಾಗಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್‌ಶೆಟ್ಟಿಬಣ)ಜಿಲ್ಲಾ ಉಸ್ತುವಾರಿ ಅಧ್ಯಕ್ಷ ದಿನೇಶ್ ಶಿವಪುರ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಭಾರೀ ಒತ್ತುವರಿ ಮಾಡಿದವರಿಗೆ ರಕ್ಷಣೆ ನೀಡುವ ಅರಣ್ಯ ಇಲಾಖೆ ಅಧಿಕಾರಿಗಳು ಜೀವನಕ್ಕಾಗಿ ಒಂದೆರಡು ಎಕರೆ ಸಾಗುವಳಿ ಮಾಡಿರುವ ರೈತರನ್ನು ಒಕ್ಕಲೆಬ್ಬಿಸುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಹೀಗಾಗಿ ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಬಡ ರೈತರನ್ನು ಕಡೆಗಣಿಸುವ ಅರಣ್ಯ ಇಲಾಖೆ ವಿರುದ್ಧ ಹೋರಾಟ ಮುಂದುವರೆಯಲಿದೆ. ಜನಸಾಮಾನ್ಯರ ಕೆಲಸ ಮಾಡಿಕೊಡದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗುವುದು. ಆದರೂ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳದಿದ್ದಲ್ಲಿ ಹೋರಾಟ ಅನಿವಾರ್ಯವಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸಲಾಗುವುದು. ಈ ತಿಂಗಳು ೫೦ ಸಾವಿರ ಸದಸ್ಯತ್ವ ನೋಂದಣಿಗೆ ಗುರಿಹೊಂದಲಾಗಿದೆ. ಹೋಬಳಿಗಳಲ್ಲಿ ಸಂಘಟನೆ ಶಾಖೆಗಳನ್ನು ಹುಟ್ಟುಹಾಕಲಾಗುವುದು. ಗ್ರಾಮಮಟ್ಟದಿಂದಲೇ ಹೋರಾಟಕ್ಕೆ ಮುಂದಾಗುವುದಾಗಿ ತಿಳಿಸಿದರು.
ಪಾಲಕರ ಆಂಗ್ಲಭಾಷಾ ವ್ಯಾಮೋಹದಿಂದ ಚಿಕ್ಕಬಾಳೂರಿನಲ್ಲಿ ೯ ವರ್ಷದ ಹಿಂದೆ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದ್ದರಿಂದ ಕನ್ನಡಶಾಲೆ ಬಾಗಿಲು ಮುಚ್ಚಿತ್ತು. ಮೊದಲು ನನ್ನ ಮಗನನ್ನು ಕಾನ್ವೆಂಟಿನಿAದ ಬಿಡಿಸಿ ೧ನೇ ತರಗತಿಗೆ ದಾಖಲು ಮಾಡಿದೆ. ಈಗ ೧೧೦ ಮಕ್ಕಳಿದ್ದಾರೆ. ೧ರಿಂದ ೫ನೇ ತರಗತಿವರೆಗೆ ಇದ್ದ ಶಾಲೆಯನ್ನು ೭ನೇ ತರಗತಿವರೆಗೆ ವಿಸ್ತರಿಸಲಾಗಿದೆ. ನಮ್ಮ ತಾಯಿಯೇ ಬಿಸಿಯೂಟ ತಯಾರಿಸಲು ಮುಂದಾದರು. ಇವರಿಗೆ ಸಿಕ್ಕಿದ ೧ ವರ್ಷದ ಗೌರವಧನವನ್ನು ಶಾಲೆಯ ಅಭಿವೃದ್ಧಿಗೆ ನೀಡಿದ್ದಾರೆ. ಪಾಲಕರೇ ಪ್ರತಿತಿಂಗಳ ಸಭೆ ನಡೆಸುತ್ತಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಗದೀಶ್, ಗೌರವಾಧ್ಯಕ್ಷ ಜಯರಾಜು, ಪ್ರಮುಖರಾದ ಮಾರುತಿ, ಹರ್ಷ, ಜೀವನ್, ಕುಮಾರ್, ಪರಮೇಶ್ವರ್, ಮಲ್ಲಿಕಾರ್ಜುನ, ಧನುಷ್ ಉಪಸ್ಥಿತರಿದ್ದರು.
ಪದಾಧಿಕಾರಿಗಳ ಆಯ್ಕೆ
ಕರ್ನಾಟಕ ರಕ್ಷಣಾವೇದಿಕೆ ಜಿಲ್ಲಾ ಉಸ್ತುವಾರಿ ಅಧ್ಯಕ್ಷರಾಗಿ ದಿನೇಶ್ ಶಿವಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎನ್.ಜಗದೀಶ್, ಜಿಲ್ಲಾ ಉಪಾಧ್ಯಕ್ಷರಾಗಿ ಕುಮಾರಣ್ಣ, ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ ಎಸ್.ಡಿ.ಜೀವನ್, ಪ್ರಧಾನಕಾರ್ಯದರ್ಶಿಯಾಗಿ ಎಚ್.ಎಸ್.ಹರ್ಷ, ಗೌರವಾಧ್ಯಕ್ಷರಾಗಿ ರಾಜಣ್ಣ, ಉಪಾಧ್ಯಕ್ಷರಾಗಿ ಡಿ.ಆರ್.ಪರಮೇಶ್ವರ್, ಲಕ್ಯಾ ಹೋಬಳಿ ಅಧ್ಯಕ್ಷರಾಗಿ ಮಾರುತಿ ಆಯ್ಕೆಯಾಗಿದ್ದಾರೆ.