

ವಿಜಯಪುರ: ನಗರದ ಹೃದಯ ಭಾಗದಲ್ಲಿರುವ ರಾಣಿ ಚೆನ್ನಮ್ಮ ನಾಟ್ಯಮಂದಿರ ನೆನೆಗುದಿಗೆ ಬಿದ್ದಿದ್ದು ಕೂಡಲೇ ಅದರ ಪುನರುಜ್ಜೀವನಗೊಳಿಸಬೇಕು. ಜೊತೆಗೆ ಕೇಂದ್ರ ಬಸ್ ನಿಲ್ದಾಣದ ಬಳಿ ನಿರ್ಮಿಸಿರುವ ಪುತ್ಥಳಿ ಅನಾವರಣಗೊಳಿಸಬೇಕೆಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಆಗ್ರಹಿಸಿದರು.
ದೇಶಕ್ಕೆ ಸ್ವಾತಂತ್ರೃ ದೊರಕಿಸಿಕೊಟ್ಟ ರಾಣಿ ಚೆನ್ನಮ್ಮ ಯಾವುದೇ ಸಮುದಾಯಕ್ಕೆ ಸೀಮಿತವಲ್ಲ. ಈ ದೇಶದ ಸ್ವಾತಂತ್ರೃ ಹೋರಾಟಗಾರ್ತಿ. ಹೀಗಾಗಿ ಅವರ ಹೆಸರಿನಲ್ಲಿರುವ ನಾಟ್ಯಮಂದಿರವನ್ನು ಕೂಡಲೇ ನಿರ್ಮಾಣ ಮಾಡಿ ಮತ್ತೆ ಕಲಾ ಸೇವೆಗೆ ಸಿದ್ಧಗೊಳಿಸಬೇಕು. ಆ ಬಗ್ಗೆ ಶೀಘ್ರದಲ್ಲಿಯೇ ಮಾಹಿತಿ ಕಲೆ ಹಾಕಿ ಹೋರಾಟ ರೂಪಿಸುವುದಾಗಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಇನ್ನು ಕೇಂದ್ರ ಬಸ್ ನಿಲ್ದಾಣದ ಎದುರು ರಾಣಿ ಚೆನ್ನಮ್ಮಳ ಪುತ್ಥಳಿ ನಿಲ್ಲಿಸಿ ನಾಲ್ಕು ವರ್ಷ ಗತಿಸುತ್ತಾ ಬಂದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಪುತ್ಥಳಿಗೆ ಹೊದಿಕೆ ಹೊದಿಸಿ ಧೀರ ಮಹಿಳೆಯನ್ನು ಬಂಧನದಲ್ಲಿ ಇರಿಸಿದಂತೆ ಮಾಡಲಾಗಿದೆ. ಇದರಿಂದ ಅವರ ಘನತೆಗೆ ಧಕ್ಕೆಯಾಗುತ್ತಿದೆ. ಸರ್ಕಾರ ಈ ಪುತ್ಥಳಿ ನಿರ್ಮಾಣಕ್ಕೆ ಅನುದಾನ ಒದಗಿಸಿಲ್ಲವೆಂದು ತಿಳಿದು ಬಂದಿದೆ. ಸಮಾಜ ಬಾಂಧವರು, ಸಂಘ ಸಂಸ್ಥೆಗಳು ದೇಣಿಗೆ ನೀಡಿ ಪುತ್ಥಳಿ ನಿರ್ಮಿಸಿದ್ದಾರೆ ಎಂಬುದು ತಿಳಿದು ಬಂದಿದೆ. ಆದ್ದರಿಂದಲೇ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಂಡಂತೆ ಕಾಣುತ್ತಿದೆ. ಜಿಲ್ಲಾಡಳಿತವು ಕೂಡಾ ನಿರ್ಲಕ್ಷೃ ವಹಿಸಿದೆ. ಈಗಲಾದರೂ ಎಚ್ಚೆತ್ತುಕೊಂಡು ಅ. 23 ರಂದು ಪುತ್ಥಳಿ ಉದ್ಘಾಟಿಸಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಸುರೇಶ ಬಿರಾದಾರ, ಎಂ.ಜಿ. ಯಂಕಂಚಿ, ಸಂಜು ಶೀಳಿನ, ಸಂದೀಪ ಇಂಡಿ ಮತ್ತಿತರರಿದ್ದರು.