ಪಂಚಮಸಾಲಿ ಮೀಸಲಾತಿಗಾಗಿ ಆರನೇ ಹಂತ ಹೋರಾಟ

PANCAMA SALI PRESS MEET (1)
Published on

ರಾಯಚೂರು: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಈಗಾಗಲೇ ಐದು ಹಂತಗಳ ಹೋರಾಟವನ್ನು ನಡೆಸಲಾಗಿದ್ದು, ಸರ್ಕಾರಗಳಿಂದ ಸೂಕ್ತ ಸ್ಪಂದನೆ ಸಿಗದ ಕಾರಣ ಆರನೇ ಹಂತದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆದ್ದಾರಿಯಲ್ಲಿ ಸಂಚಾರ ತಡೆ ನಡೆಸುವ ಮೂಲಕ ಹೋರಾಟ ನಡೆಸಲಾಗುತ್ತಿದೆ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಬಿಜೆಪಿ ಸರ್ಕಾರದ ಅವಯಲ್ಲಿ ಪಾದಯಾತ್ರೆ, ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಧರಣಿ ಸೇರಿದಂತೆ ಐದು ಹಂತದ ಹೋರಾಟ ನಡೆಸಲಾಗಿತ್ತು. ಈಗಿನ ಸಿಎಂ ಸಿದ್ದರಾಮಯ್ಯ ಕೂಡಾ ಸೂಕ್ತ ಸ್ಪಂದನೆ ನೀಡದ ಕಾರಣ ಹೋರಾಟವನ್ನು ಮುಂದುವರಿಸಲಾಗುತ್ತಿದೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದ ಅವಯಲ್ಲಿ ಆಡಳಿತದ ಕೊನೆ ಗಳಿಗೆಯಲ್ಲಿ 2ಡಿ ಮೀಸಲಾತಿ ನೀಡುವುದಾಗಿ ಘೋಷಿಸಲಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಘೋಷಣೆ ಜಾರಿಗೊಳ್ಳಲಿಲ್ಲ. 2ಡಿ ಮೀಸಲಾತಿ ಬದಲು 2ಎ ಮೀಸಲಾತಿ ನೀಡುವಂತೆ ಈಗಿನ ಸರ್ಕಾರಕ್ಕೆ ಒತ್ತಾಯಿಸಲಾಗುತ್ತಿದೆ.
ಬೆಳಗಾವಿಯಲ್ಲಿ ನಡೆದ ಸಮಾವೇಶ ನಂತರ ಸಮುದಾಯದ ಶಾಸಕರೊಂದಿಗೆ ಮುಖ್ಯಮಂತ್ರಿಗೆ ಮನವಿ ಮಾಡಲಾಗಿತ್ತು. ಅವೇಶನ ಮುಗಿದ ನಂತರ ಕಾನೂನು ತಜ್ಞರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದರು. ಅವೇಶನ ಮುಗಿದು ವಾರ ಕಳೆದರೂ ಯಾವುದೇ ಕ್ರಮಕೈಗೊಳ್ಳಲಾಗಿಲ್ಲ.
ಹೀಗಾಗಿ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ನಡೆಸುವ ಮೂಲಕ ಸಂಚಾರ ತಡೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ. ಈಗಾಗಲೇ ಬೆಳಗಾವಿ, ಗದಗ, ಕೊಪ್ಪಳ, ಬಾಗಲಕೋಟೆ ಸೇರಿದಂತೆ ಹಲವೆಡೆ ಹೋರಾಟ ನಡೆಸಲಾಗಿದೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಡೋಣಾ ಗ್ರಾಮದ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಭಾನುವಾರ ಇಷ್ಟಲಿಂಗ ಪೂಜೆ ನಡೆಸಿ ಸಂಚಾರ ತಡೆ ನಡೆಸಲಾಗುತ್ತಿದೆ.
ಹೋರಾಟದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಸಮುದಾಯದ ನಾಯಕರು ಹಾಗೂ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಮುದಾಯದ ಜನರು ಪಾಲ್ಗೊಳ್ಳಲಿದ್ದಾರೆ.
ಜಾತಿ ಗಣತಿಗೆ ವಿರೋಧವಿಲ್ಲ. ಆದರೆ ಗಣತಿ ಯಾವುದೇ ಸಮುದಾಯಕ್ಕೆ ಅನ್ಯಾಯವಾಗದಂತೆ ವೈಜ್ಞಾನಿಕವಾಗಿ ನಡೆಸಬೇಕು. ಕಾಂತಾರಾಜ ವರದಿ ಜಾರಿಗೆ ಮುಂಚೆ ಮುಖ್ಯಮಂತ್ರಿ ಎಲ್ಲ ಸಮುದಾಯದ ಮಠಾೀಶರನ್ನು ಕರೆದು ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಡಾ.ಬಾಬುರಾವ್ ಶೇಗುಣಸಿ, ಸಂಗಮೇಶ ಮಂಗಣ್ಣನವರ, ವೀರೇಶ ಕೊಟ್ಟೂರು, ವಿಜಯಗೌಡ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net