ಅಸ್ತಿತ್ವಕ್ಕಾಗಿ ತಾಯಿ ನೆಲದಲ್ಲಿಯೇ ಹೋರಾಟ

4.npk-1
ಮಕ್ಕಂದೂರು ಕೊಡವ ಸಮಾಜದ ಆಶ್ರಯದಲ್ಲಿ ನಡೆದ ಉಮ್ಮೇಟಿ ಕೋಲ್ ಮಂದ್ ಮತ್ತು ಪುತ್ತರಿ ಊರೋರ್ಮೆ ಕಾರ್ಯಕ್ರಮವನ್ನು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿದರು.
Published on

ನಾಪೋಕ್ಲು: ಕೊಡಗಿನ ಮೂಲ ನಿವಾಸಿ ಜನಾಂಗವಾಗಿರುವ ಕೊಡವರು, ಇಂದು ತಮ್ಮ ಅಸ್ತಿತ್ವಕ್ಕಾಗಿ ತಮ್ಮ ತಾಯಿನೆಲದಲ್ಲಿಯೇ ಹೋರಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷರು, ನಡುಬಾಡೆ ಸಂಪಾದಕರೂ ಆಗಿರುವ ಚಾಮೆರ ದಿನೇಶ್ ಬೆಳ್ಯಪ್ಪ ಬೇಸರ ವ್ಯಕ್ತಪಡಿಸಿದರು.

ಮಕ್ಕಂದೂರು ಕೊಡವ ಸಮಾಜದ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಉಮ್ಮೇಟಿ ಕೋಲ್ ಮಂದ್ ಮತ್ತು ಪುತ್ತರಿ ಊರೋರ್ಮೆ ಕಾರ್ಯಕ್ರಮವನ್ನು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಚಾಲನೆ ನೀಡಿ, ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಮಾತನಾಡಿದರು.

ನಮ್ಮತನವನ್ನು ಕಾಯ್ದುಕೊಳ್ಳಲು, ಕೊಡವಾಮೆಯ ಬೇರನ್ನು ಗಟ್ಟಿಗೊಳಿಸುವಲ್ಲಿ ಏಳ್‌ನಾಡ್ ಕೊಡವರ ಜವಾಬ್ದಾರಿ ಅಧಿಕವಾಗಿದೆ. ಈ ನಿಟ್ಟಿನಲ್ಲಿ ಈ ಭಾಗಕ್ಕೆ ಅಡಗಿರುವ ನಾಲ್ಕು ಕೊಡವ ಸಮಾಜಗಳು ಒಮ್ಮತದ ಯೋಜನೆ ತಯಾರಿಸಬೇಕಿದೆ. ಏಳ್‌ನಾಡ್ ಎಂದರೆ ಕೊಡವಾಮೆಯ ಗೂಡು ಎನ್ನುವ ನಂಬಿಕೆ ಇದೆ. ಆದರೆ ಅದು ಇಂದಿನ ಕಾಲದಲ್ಲಿ ಎಷ್ಟರ ಮಟ್ಟಿಗೆ ಆ ಗೂಡನ್ನು ನಾವು ಉಳಿಸಿಕೊಂಡಿದ್ದೇವೆ ಎನ್ನುವುದನ್ನು ನಾವು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ಸಮಯ ಬಂದಿದೆ ಎಂದರು.

ಕೊಡಗಿನ ಮೂರು ಪ್ರಮುಖ ಭಾಗಗಳಾದ ಕ್‌ಗ್ಗಟ್ಟ್, ಮೇಂದಲೆ ಮತ್ತು ಏಳ್‌ನಾಡ್ ಭಾಗಗಳನ್ನು ತುಲನೆ ಮಾಡಿದರೆ, ಪದ್ಧತಿ ಪರಂಪರೆ, ಆಟ್‌ಪಾಟ್‌ಗಳಲ್ಲಿ ಏಳ್‌ನಾಡ್ ಮುಂಚೂಣಿಯಲ್ಲಿದೆ. ಆದರೆ ಕೊಡವಾಮೆಗೆ ಸಂಬಂಧಿಸಿದ ಹೋರಾಟದ ವಿಚಾರಕ್ಕೆ ಬಂದಾಗ ನಾವು ಸಾಕಷ್ಟು ಹಿಂದೆ ಇದ್ದೇವೆ. ಮೇಂದಲೆ ಮತ್ತು ಕ್‌ಗ್ಗಟ್ಟ್ ನಾಡಿನೊಂದಿಗೆ ನಾವೂ ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಕೈ ಜೋಡಿಸಿದರೆ ಕೊಡವಾಮೆಯ ಬೆಳವಣಿಗೆಗೆ ಮತ್ತಷ್ಟು ಪ್ರಖರತೆ ದೊರೆಯಲಿದೆ ಎಂದರು.

ಆಟ್‌ಪಾಟ್, ಪದ್ಧ್ದತಿ ವಿಚಾರದಲ್ಲೂ ಏಳ್‌ನಾಡ್ ತನ್ನ ಘತ ವೈಭವ ಕಳೆದುಕೊಳ್ಳುತ್ತಿದ್ದು, ಕಲೆ ಸಂಸ್ಕೃತಿಯ ಜತೆಗೆ ಕೊಡವಾಮೆಯ ಉಳಿವಿಗೂ ನಾವು ಕೈಜೋಡಿಸಬೇಕಿದೆ ಎಂದರು.

ಕೊಡಗಿನ ಇತಿಹಾಸಕ್ಕೆ ಏಳ್‌ನಾಡಿನ ಕೊಡುಗೆ ಮಹತ್ತರವಾಗಿದ್ದು, ಇತಿಹಾಸದ ಪುಟಗಳಲ್ಲಿ ಗೋಚರವಾಗುವುದು ತೀರಾಕಡಿಮೆ. ನಮ್ಮ ನಾಡಿನ ಬಗ್ಗೆ ನಮಗಿರುವ ಅಭಿಮಾನದ ಕೊರತೆಯೇ ಇದಕ್ಕೆ ಮೂಲ ಕಾರಣವಾಗಿದ್ದು, ಈ ಅಭಿಮಾನವನ್ನು ಬೆಳೆಸುವತ್ತ ನಾವುಗಳು ಮುಂದಡಿ ಇಡಬೇಕು ಎಂದರು.

ಕೊಡವಾಮೆಯ ಭೀರ್ಯ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಇಂದಿನಿಂದಲೇ ಮಕ್ಕಳನ್ನು ಕೊಡವ ಪರಂಪರೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆಯಬೇಕು. ಈ ಜವಾಬ್ದಾರಿ ತಾಯಂದಿರ ಮೇಲೆ ಹೆಚ್ಚಿದೆ. ಕೇವಲ ಶಾಲೆ ಮತ್ತು ಅಂಕ ಪಡೆಯುವತ್ತ ಗಮನ ಕೇಂದ್ರೀಕರಿಸದೆ ನಮ್ಮ ಮೂಲತನದ ಉಳಿವಿಗೆ ಸಂಸ್ಕೃತಿಯ ಅರಿವು ಮೂಡಿಸುವುದೂ ಅನಿವಾರ್ಯ ಎಂದರು.

ಈ ನಿಟ್ಟಿನಲ್ಲಿ ಏಳ್‌ನಾಡ್ ಭಾಗದ ಪ್ರಮುಖ ಸಮಾಜಗಳಾದ ಮಡಿಕೇರಿ, ಮಕ್ಕಂದೂರು, ಮಾದಾಪುರ, ಗರ್ವಾಲೆ ಕೊಡವ ಸಮಾಜಗಳು ಒಮ್ಮತದ ಯೋಜನೆಯನ್ನು ತಯಾರಿಸುವ ಮೂಲಕ ಮುಂದಿನ ದಿನಗಳಲ್ಲಿ ಕ್‌ಗ್ಗಟ್ಟ್ ಮತ್ತು ಮೇಂದಲೆ ನಾಡ್‌ಗಳೊಂದಿಗೆ ಕೈ ಜೋಡಿಸಿದರೆ, ಕೊಡವರ ಒಗ್ಗಟ್ಟಿಗೆ ಮತ್ತಷ್ಟು ಬಲ ಬರಲಿದೆ ಈ ನಿಟ್ಟಿನಲ್ಲಿ ಚಿಂತಿಸುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ, ಮಕ್ಕಂದೂರು ಕೊಡವ ಸಮಾಜ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ ಮಾತನಾಡಿ, ಜನಾಂಗದ ಏಳಿಗೆಗೆ ಮಕ್ಕಂದೂರು ಕೊಡವ ಸಮಾಜ ಎಂದಿಗೂ ಮುಂದೆ ನಿಂತಿದ್ದು, ಮುಂದೆಯೂ ಯಾವುದೇ ಸಂದರ್ಭದಲ್ಲಿಯೂ ನಾವು ಜನಾಂಗದ ಜತೆ ನಿಲ್ಲಲಿದ್ದೇವೆ ಎಂದರು.

ಮುಂದಿನ ದಿನಗಳಲ್ಲಿ ಯುವಕರನ್ನು ಕೊಡವಾಮೆಯತ್ತ ಸೆಳೆಯಲು ಹಲವು ಯೋಜನೆಗಳನ್ನು ಸಿದ್ಧಪಡಿಸುವ ಚಿಂತನೆ ಹೊಂದಿದ್ದು, ಈ ನಿಟ್ಟಿನಲ್ಲಿ ಕೊಡವ ಸಮಾಜದ ಮಹಿಳಾ ಘಟಕ ಮತ್ತು ಯುವ ಘಟಕ ಶ್ರಮಿಸುತ್ತಿದೆ ಎಂದರು.

ವೇದಿಕೆಯಲ್ಲಿ ಮಕ್ಕ್ನಾಡ್ ತಕ್ಕರಾದ ಸಬ್ಬುಡ ದಿನೇಶ್, ಪಾಲೇರಿ ನಾಡ್ ತಕ್ಕರಾದ ಐಮುಡಿಯಂಡ ದೇವಯ್ಯ, ಬದಿಗೇರಿ ನಾಡ್‌ತಕ್ಕರಾದ ಶಾಂತೆಯಂಡ ರಾಜೇಶ್ ಕಾವೇರಪ್ಪ, ಮಕ್ಕಂದೂರು ಕೊಡವ ಸಮಾಜ ಆಡಳಿತ ಮಂಡಳಿಯ ನಿರ್ದೇಶಕರು, ಮಹಿಳಾ ಘಟಕ, ಯುವ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು, ಸಮಾಜ ವ್ಯಾಪ್ತಿಯ ಕೊಡವಾಭಿಮಾನಿಗಳು ಹಾಜರಿದ್ದರು.

ಕಾರ್ಯಕ್ರಮದ ಮೊದಲಿಗೆ ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಉಮ್ಮೇಟಿ ಮಂದ್‌ನಲ್ಲಿ ಕೋಲಾಟ ಆಡುವ ಮೂಲಕ ಸಂಭ್ರಮಿಸಲಾಯಿತು. ನೆರೆದಿದ್ದ ಸರ್ವರಿಗೂ ಸಮಾಜದ ವತಿಯಿಂದ ಊಟೋಪಾಹಾರ ಆಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net