ಬರಪೀಡಿತ ಪ್ರದೇಶ ಘೋಷಣೆಗೆ ಹೋರಾಟ

Savanur strike
Published on

ಸವಣೂರ: ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ಬಿತ್ತನೆಗೆ ತಗುಲಿದ ವೆಚ್ಚವನ್ನು ಸರ್ಕಾರ ಭರಿಸಬೇಕು ಮತ್ತಿತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ರೈತರು ಪಟ್ಟಣದ ಹೆಸ್ಕಾಂ ಇಲಾಖೆ ಆವರಣದಿಂದ ಚಕ್ಕಡಿಯೊಂದಿಗೆ ಸೋಮವಾರ ಪ್ರತಿಭಟನೆ ನಡೆಸಿದರು.

‘ಅನಾವೃಷ್ಟಿಯಿಂದ ಬೆಳೆಗಳು ಸಂಪೂರ್ಣ ಹಾಳಾಗಿದ್ದು ಬೆಳೆ ವಿಮೆ ಘೋಷಿಸಬೇಕು. ರೈತರ ಪಂಪ್‌ಸೆಟ್‌ಗಳಿಗೆ 3ಫೇಸ್ ವಿದ್ಯುತ್‌ನ್ನು 7 ತಾಸು ನೀಡಬೇಕು. ರೈತರ ಸಾಲ ಮನ್ನಾ ಮಾಡಬೇಕು. ಸಾಲ ವಸೂಲಾತಿಗಾಗಿ ನಿರಂತರ ಕಿರುಕುಳ ನೀಡುವ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿ ಸಾಲ ಮರು ಪಾವತಿಗೆ ರೈತರಿಗೆ ಸಮಯ ನೀಡಬೇಕು. ನಿಗದಿತ ಅವಧಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ರೈತರಿಗೆ ಸಮಯಕ್ಕೆ ಸರಿಯಾಗಿ ಟಿಸಿ ನೀಡಬೇಕು. ರೈತರ ಕುಂದುಕೊರತೆ ಆಲಿಸಲು ಪ್ರತಿ ತಿಂಗಳು ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಬೇಕು ಎಂದು ರೈತರು ಒತ್ತಾಯಿಸಿದರು.

ಎತ್ತಿನ ಚಕ್ಕಡಿ ಮೂಲಕ ಹಲಗೆ ಬಾರಿಸುತ್ತ ದಂಡಿನಪೇಟೆ ದುರ್ಗಾದೇವಿ ದೇವಸ್ಥಾನ, ಸಿಂಪಿಗಲ್ಲಿ ಗಣೇಶ ದೇವಸ್ಥಾನ, ಹಳೇ ಕೋರ್ಟ್ ವೃತ್ತ ಮಾರ್ಗವಾಗಿ ಉಪವಿಭಾಗಾಧಿಕಾರಿಗಳ ಕಾರ್ಯಾಲಯವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿ ಉಪ ವಿಭಾಗಾಧಿಕಾರಿ ಮೊಹಮ್ಮದ ಖಿಜರ್ ಅವರಿಗೆ ಮನವಿ ಸಲ್ಲಿಸಿದರು.

ರೈತ ಸಂಘ ಹಾಗೂ ಹಸಿರು ಸೇನೆ (ಎಚ್.ಆರ್.ಬಸವರಾಜಪ್ಪ ಬಣ) ಜಿಲ್ಲಾ ಘಟಕ ಅಧ್ಯಕ್ಷ ಎಂ.ಎನ್. ನಾಯಕ, ತಾಲೂಕು ಅಧ್ಯಕ್ಷ ಸಂಗಮೇಶ ಪೀತಾಮಶೆಟ್ಟಿ, ನೂರಹ್ಮದ ಮುಲ್ಲಾ, ಫಕೀರಪ್ಪ ಜೋಗೇರ, ಕಾಮಣ್ಣ ಜೋಗೇರ, ಮಲ್ಲೇಶ ದೇವಗೇರಿ, ಆರ್.ಆರ್. ಡಂಬಳ, ರೋಪಖಾನ್ ಡಂಬಳ, ಗುಡ್ಡಪ್ಪ ಬಂಕಾಪೂರ, ಸಿದ್ದಪ್ಪ ಕಣವಿ, ಶಬ್ಬೀರ ಕಾರಿಗಾರ, ಜಗದೀಶ ತಿಮ್ಮಣ್ಣನವರ, ಶಂಶುದ್ದೀನ್ ಮುಲ್ಲಾ, ಮಹೇಶ ಬಂಕಾಪೂರ, ಮಂಜು ಪೀತಾಮಶೆಟ್ಟಿ, ಮಂಜುನಾಥ ಕಾಳಶೆಟ್ಟಿ, ವೀರನಗೌಡ ಪಾಟೀಲ, ಶಿವನಗೌಡ ಪಾಟೀಲ, ಶಂಕ್ರಪ್ಪ ವಾಡೇದ, ಸುರೇಶಗೌಡ ನಾಗನಗೌಡ್ರ, ಸುರೇಶ ಹಡಪದ ಹಾಗೂ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net