

ಮುಂಡಗೋಡ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ವತಿಯಿಂದ ಬುಧವಾರ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಪ್ರತಿಭಟನಾ ಮೆರವಣಿಗೆ ಮೂಲಕ ಪಟ್ಟಣ ಪಂಚಾಯಿತಿ ಸಭಾ ಭವನದವರೆಗೆ ತೆರಳಿ ಅಲ್ಲಿ ಸಮಾವೇಶ ನಡೆಸಲಾಯಿತು.
ಎಲ್ಲ ಎಪಿಎಂಸಿ ಬಜಾರ್, ಗ್ರಾಮೀಣ ಪ್ರದೇಶಗಳಲ್ಲಿ ಮಿಲ್, ಗೋದಾಮುಗಳಲ್ಲಿ ಕಾರ್ಯನಿರ್ವಹಿಸುವ ಹಮಾಲರಿಗೆ ಗುರುತಿನ ಚೀಟಿ, ಭವಿಷ್ಯನಿಧಿ, ಇಎಸ್‌ಐ, ಬೋನಸ್, ಪಿಂಚಣಿ, ಮರಣ ಪರಿಹಾರ ಮುಂತಾದವುಗಳ ಬಗ್ಗೆ ಕಾನೂನು ಜಾರಿಗೆ ತರಬೇಕು. ಸಾರಿಗೆ ಕ್ಷೇತ್ರದ ಕಾರ್ಮಿಕರಿಗೆ ಸ್ಥಾಪಿಸಲಾಗುತ್ತಿರುವ ಉದ್ದೇಶಿತ ಕಲ್ಯಾಣ ಮಂಡಳಿಯಲ್ಲಿ ವಾಣಿಜ್ಯ ವಾಹನಗಳಲ್ಲಿ ಲೋಡಿಂಗ್, ಅನ್ ಲೋಡಿಂಗ್ ಕೆಲಸ ನಿರ್ವಹಿಸುವ ಹಮಾಲಿ ಕಾರ್ಮಿಕರನ್ನು ಸೇರಿಸಿಕೊಳ್ಳಬೇಕು. ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಮರುರಚಿಸಬೇಕು. ಮಂಡಳಿಯಲ್ಲಿ ಹಮಾಲಿ ಫೆಡರೇಷನ್‌ಗೆ ಪ್ರಾತಿನಿಧ್ಯ ನೀಡಬೇಕು ಹೀಗೆ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಲಾಯಿತು.
ಒಕ್ಕೂಟದ ಭೀಮಣ್ಣ ಭೋವಿವಡ್ಡರ, ಹನುಮಂತಪ್ಪ ಮಂಜುನಾಥ ಮುಂತಾದವರಿದ್ದರು.