

ಸೋಮವಾರಪೇಟೆ: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಡ್ಡಿಕೊಪ್ಪ, ನಾಡ್ನಳ್ಳಿ ಗ್ರಾಮಗಳು ಸೇರಿದಂತೆ ಇತರ ಗ್ರಾಮಗಳ ರಸ್ತೆಗಳ ಡಾಂಬರೀಕರಣಕ್ಕೆ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಸೋಮವಾರಪೇಟೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯಿಸಿದೆ.
ಹೋರಾಟ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳಿ ಅವರ ನೇತೃತ್ವದಲ್ಲಿ ತಡಿಕೊಪ್ಪ ಗ್ರಾಮಕ್ಕೆ ತೆರಳಿದ ಸಮಿತಿ ಪದಾಧಿಕಾರಿಗಳು, ರೈತರ ಸಮಸ್ಯೆಗಳನ್ನು ಆಲಿಸಿದರು. ವಾರ್ಷಿಕವಾಗಿ 370 ರಿಂದ 450 ಇಂಚು ಮಳೆ ಬೀಳುತ್ತಿದೆ. ಕೃಷಿ ಫಸಲು ಹಾನಿಯಾಗುತ್ತಿದೆ. ಕಾಫಿ, ಏಲಕ್ಕಿ, ತರಕಾರಿ ಬೆಳೆ ಹಾಳಾಗುತ್ತಿದೆ. ರೋಗಭಾದೆಯಿಂದ ಕೃಷಿಯಲ್ಲಿ ನಷ್ಟ ಅನುಭವಿಸಬೇಕಾಗಿದೆ. ಮಳೆಗಾಲದಲ್ಲಿ ಕುಮಾರಧಾರಾ ನದಿ ಉಕ್ಕಿ ಹರಿದರೆ, ತಡ್ಡಿಕೊಪ್ಪ ಗ್ರಾಮ ಪಟ್ಟಣ ಸಂಪರ್ಕವನ್ನು ಕಳೆದುಕೊಳ್ಳಬೇಕಾಗುತ್ತದೆ. ಗ್ರಾಮಕ್ಕೆ ರಸ್ತೆ ಇಲ್ಲ. ಒಂದು ಕಿ.ಮೀ.ಕಚ್ಚಾರಸ್ತೆಯಲ್ಲೇ ಕಾಲ್ನಡಿಗೆಯಲ್ಲಿ ತೆರಳಬೇಕು. ಬದುಕು ತುಂಬ ಕಷ್ಟವಾಗಿದೆ ಎಂದು ರೈತ ಮಹಿಳೆ ರತಿ ಅವರು ತಮ್ಮ ಸಂಕಷ್ಟ ಹೇಳಿಕೊಂಡರು.
ಅಧ್ಯಕ್ಷ ಅರುಣ್ ಕೊತ್ನಳ್ಳಿ ಮಾತನಾಡಿ, ರೈತ ಮಹಿಳೆ ರತಿ ಅವರು ಕಳೆದ 21 ವರ್ಷಗಳ ಹಿಂದೆ ತಮ್ಮ ಪತಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಎರಡು ಗಂಡು ಮಕ್ಕಳಿದ್ದು, ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆರ್ಥಿಕ ಸಮಸ್ಯೆಯಿಂದ ಗಂಡ ಕಟ್ಟಿದ ಮನೆಯ ಮುಂದುವರಿದ ಕೆಲಸವನ್ನು ಕಳೆದ 21 ವರ್ಷಗಳಿಂದ ಮಾಡಲು ಸಾಧ್ಯವಾಗಿಲ್ಲ. ಬರುವ ಆದಾಯ ಜೀವನ ನಿರ್ವಹಣೆ ಮತ್ತು ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಾಗುತ್ತಿಲ್ಲ. ಈ ಕಾರಣದಿಂದ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿ ಸದಸ್ಯರು ನೀಡುವ ಹಣದಲ್ಲಿ ರೈತ ಮಹಿಳೆಯ ಮನೆಯ ಪ್ಲಾಸ್ಟರ್ ಮತ್ತು ಟೈಲ್ಸ್ ಹಾಕಿ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.
ಹಸಿ ಇಟ್ಟಿಗೆಯಿಂದ ಗೋಡೆಯನ್ನು ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಕುಸಿಯುವ ಭೀತಿಯೂ ಎದುರಾಗಿದೆ ಎಂದು ರತಿ ಆತಂಕ ವ್ಯಕ್ತಪಡಿಸಿದರು. ಕೂಡಲೇ ಮನೆ ಕೆಲಸ ಮಾಡಿಸುವುದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅರುಣ್ ಭರವಸೆ ನೀಡಿದರು.
ಸಮಿತಿ ಉಪಾಧ್ಯಕ್ಷ ಕೆ.ಎನ್.ದೀಪಕ್, ಪದಾಧಿಕಾರಿಗಳಾದ ಜಿ.ಎಂ.ಹೂವಯ್ಯ, ಜಯರಾಮ್, ತೀಶೂಲ್, ಆದರ್ಶ್ ತಮ್ಮಯ್ಯ, ಮೋಹಿತ್ ಮತ್ತಿತರರು ಇದ್ದರು.