ವಾರಾಹಿ ನೀರಿಗಾಗಿ ಹೋರಾಟ ಸಮಿತಿ ರಚನೆ

varahi
ವಾರಾಹಿ ಯೋಜನೆಗೆ ಸಂಬಂಧಿಸಿ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ವಾರಾಹಿ ಕಚೇರಿಯಲ್ಲಿ ಸಭೆ ನಡೆಸಿದರು
Published on

ವಿಜಯವಾಣಿ ಸುದ್ದಿಜಾಲ ಕುಂದಾಪುರ

ವಾರಾಹಿ ಯೋಜನೆಗೆ ಸಂಬಂಧಿಸಿ ಬೈಂದೂರು ವಿಧಾನಸಭಾ ಕ್ಷೇತ್ರಕ್ಕಾಗುವ ಉಪಯೋಗ ಮತ್ತು ಬೈಂದೂರು ಗ್ರಾಮಸ್ಥರಿಗೆ ಯೋಜನೆ ತಲುಪದಿರುವ ಕುರಿತು ಶಾಸಕ ಗುರುರಾಜ್ ಗಂಟಿಹೊಳೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಬುಧವಾರ ವಾರಾಹಿ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಗ್ರಾಮಸ್ಥರ ಸಭೆಯಲ್ಲಿ ಈ ಕುರಿತು ಶಾಸಕರು ಪ್ರತಿಕ್ರಿಯಿಸಿದ್ದು, ಬೈಂದೂರು ಕ್ಷೇತ್ರದ ಗ್ರಾಮಗಳಿಗೆ ವಾರಾಹಿ ನೀರುಣಿಸಲು ಇರುವ ಯೋಜನೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಲು ಸೂಚಿಸಿದರು. ಜತೆಗೆ ವಾರಾಹಿ ನೀರು ವಂಚಿತ ಹಾಗೂ ಬೈಂದೂರು ಕ್ಷೇತ್ರಕ್ಕೆ ವಾರಾಹಿ ನೀರು ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಿ ಸರ್ಕಾರಕ್ಕೆ ಮನವರಿಕೆ ಮಾಡಲು ವಿಫಲರಾದ ಅಧಿಕಾರಿಗಳ ಕುರಿತು ಶಾಸಕರು ಬೇಸರ ವ್ಯಕ್ತಪಡಿಸಿದರು.

ಬೈಂದೂರಿಗೆ ವಾರಾಹಿ ನೀರು ಒದಗಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸುವುದರ ಜತೆಗೆ ಹೊಸದಾಗಿ ಯೋಜನೆ ರೂಪಿಸಿ ಕಾರ್ಯಗತ ಮಾಡುವ ನಿಟ್ಟಿನಲ್ಲಿಯೂ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದರು.

ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ವಾರಾಹಿ ನೀರು ಪೂರೈಸುವ ವಾರಾಹಿ ಯೋಜನೆ ಸಮರ್ಪಕ ಅನುಷ್ಠಾನಕ್ಕಾಗಿ ಸುದೀರ್ಘ ಹೋರಾಟಕ್ಕೆ ಯೋಜನೆ ರೂಪಿಸಲಾಗಿದ್ದು, ಪ್ರತ್ಯೇಕ ಹೋರಾಟ ಸಮಿತಿ ರಚಿಸಲಾಗಿದೆ. ಇದರಿಂದ ಕ್ಷೇತ್ರದ ರೈತರಿಗೆ ಅನುಕೂಲವಾಗಲಿದೆ. ಸಮಿತಿ ಸಭೆಯ ನಿರ್ಧಾರದಂತೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಿದ್ದೇವೆ. ಇಲ್ಲಿನ ರೈತರ ಅನುಕೂಲಕ್ಕಾಗಿ ಸುದೀರ್ಘ ಹೋರಾಟ ನಡೆಯಲಿದೆ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಮಾಹಿತಿ ನೀಡಿದರು.

ಮೂರು ವರ್ಗಗಳಾಗಿ ವಿಂಗಡಣೆ

ಕ್ಷೇತ್ರಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ ಗ್ರಾಮಗಳ ವಿಂಗಡಿಸಿರುವ ಕುರಿತು ಶಾಸಕರು ಮಾಹಿತಿ ನೀಡಿದ್ದು, ವಾರಾಹಿ ನೀರು ವಂಚಿತ ಗ್ರಾಮ, ಭಾಗಶಃ ವಂಚಿತ ಗ್ರಾಮ ಹಾಗೂ ಸಂತ್ರಸ್ತ ಗ್ರಾಮಗಳು ಎಂದು ಮೂರು ವರ್ಗದ ಪಟ್ಟಿ ಮಾಡಲಾಗಿದ್ದು, ಎಲ್ಲ ವರ್ಗಗಳಿಗೂ ಪೂರ್ಣ ಪ್ರಮಾಣದಲ್ಲಿ ನೀರು ಪೂರೈಸಲು ಬೇಕಾದ ಹೋರಾಟ ರೂಪಿಸಲಿದ್ದೇವೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net