

ಶಿರಹಟ್ಟಿ: ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ರಾಹುಲ್‌ಗಾಂಧಿ ಅವರನ್ನು ದೋಷಿ ಎಂದು ಸಾಬೀತುಪಡಿಸಲು ಹಾಗೂ ಅವರನ್ನು ಲೋಕಸಭೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಕಾರಣವಾಗುವ ಸೇಡಿನ ಕ್ರಮವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ ಎಂದು ಆರೋಪಿಸಿ ಪಟ್ಟಣದ ಗಾಂಧಿ ವೃತ್ತದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬುಧವಾರ ಮೌನ ಪ್ರತಿಭಟನೆ ಮಾಡಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಡಿ. ಮಾಗಡಿ ಮಾತನಾಡಿ, ರಾಹುಲ್‌ಗಾಂಧಿ ಅವರು ದೇಶದ ಸ್ವಾಭಿಮಾನಕ್ಕೆ ಧಕ್ಕೆ ತರುವಂಥ ಕೆಲಸ ಮಾಡಿಲ್ಲ. ಆದರೆ, ಅವರು ಮಾಡಿದ ಭಾಷಣ ಮುಂದಿಟ್ಟುಕೊಂಡು ಅವರನ್ನು ರಾಜಕೀಯದಿಂದ ಅನರ್ಹಗೊಳಿಸಲು ಬಿಜೆಪಿ ನಡೆಸುತ್ತಿರುವ ಷಡ್ಯಂತ್ರ ಖಂಡನಾರ್ಹ. ದೇಶ, ಸತ್ಯದ ಪರವಾಗಿ ಧ್ವನಿ ಎತ್ತುವ ರಾಹುಲ್ ಗಾಂಧಿ ಅವರ ಪರ ಇಡೀ ದೇಶದ ಜನ ಧ್ವನಿ ಎತ್ತಿ ತಕ್ಕ ಪಾಠ ಕಲಿಸಲಿದೆ ಎಂದರು.
ಶಿವನಗೌಡ ಪಾಟೀಲ, ಪರಮೇಶ ಪರಬ, ರಮೇಶ ಮಲ್ಲಾಡದ, ಬಡನ್‌ಶಾ ಮಕಾನದಾರ, ಮುತ್ತು ಭಾವಿಮನಿ, ರಾಮಚಂದ್ರ ಗಡಾದ, ದುರ್ಗಪ್ಪ ಪವಾರ, ಹೊನ್ನಪ್ಪ ಶಿರಹಟ್ಟಿ, ಇಸಾಕ್ ಆದ್ರಳ್ಳಿ, ಆಶ್ರತ್ ಢಾಲಾಯತ, ಮಂಜುನಾಥ ಘಂಟಿ, ಬಸವರಾಜ ಹತ್ತಿಕಾಳ, ಆರ್.ಆರ್. ಗಡ್ಡದೇವರಮಠ, ಗೌಸ್ ಲಾಜಿಮ್, ಬಾಬು ಮಾಚೇನಹಳ್ಳಿ, ಈರಣ್ಣ ಚವ್ಹಾಣ, ಅಲ್ಲಾಬಕ್ಷ ನಗಾರಿ, ಮಾಬುಸಾಬ ಲಕ್ಷ್ಮೇಶ್ವರ, ಅಜಮತಲಿ ಮಕಾನದಾರ ಇತರರಿದ್ದರು.