ಸಭೆಗೆ ಗೈರಾದ ತಹಸೀಲ್ದಾರ್ ವಿರುದ್ಧ ಹೋರಾಟ

MDG n
ಮೂಡಿಗೆರೆ ತಾಲೂಕು ಕಚೇರಿ ಆವರಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದರು. ಸುರೇಶ್ ಪೂಜಾರಿ, ಅರುಣ್ ಪೂಜಾರಿ, ಯೋಗೇಶ್ ಇತರರಿದ್ದರು.
Published on

ಮೂಡಿಗೆರೆ: ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಗೆ ತಹಸೀಲ್ದಾರ್ ಗೈರಾಗಿದ್ದಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಪದಾಧಿಕಾರಿಗಳು ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಸುರೇಶ್ ಪೂಜಾರಿ ಮಾತನಾಡಿ, ನಾರಾಯಣ ಗುರುಗಳ ಜಯಂತಿ ಆ.31ಕ್ಕೆ ನಿಗದಿಯಾಗಿದೆ. ತಾಲೂಕು ಆಡಳಿತದ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಜಯಂತಿ ಆಚರಿಸುವ ಸಂಬಂಧ ಆ.14ರಂದು ಪೂರ್ವಭಾವಿ ಸಭೆ ನಿಗದಿಪಡಿಸಲಾಗಿತ್ತು. ಅಂದಿನ ಸಭೆಯಲ್ಲಿ ತಹಸೀಲ್ದಾರ್ ಭಾಗವಹಿಸಿರಲಿಲ್ಲ. ಹಾಗಾಗಿ ಸಭೆ ಮುಂದೂಡಲಾಗಿತ್ತು. ಆ.17ರಂದು ಮಧ್ಯಾಹ್ನ 3ಕ್ಕೆ ಮತ್ತೆ ತಹಸೀಲ್ದಾರ್ ಸಭೆ ನಿಗದಿಪಡಿಸಿದ್ದರು. ಅವರೇ ಆಯೋಜಿಸಿದ್ದ ಸಭೆಗೆ ತಹಸೀಲ್ದಾರ್ ಶಿವಶರಣಪ್ಪ ಕಟ್ಟೊಳಿ ಹಾಜರಾಗಲಿಲ್ಲ. ಪದೇಪದೆ ಗೈರಾಗುತ್ತಿರುವ ತಹಸೀಲ್ದಾರ್ ನಮ್ಮ ಸಮುದಾಯವನ್ನು ಹಾಗೂ ನಾರಾಯಣ ಗುರುಗಳಂತಹ ಮಹಾತ್ಮರನ್ನು ನಿರ್ಲಕ್ಷಿೃಸುವ ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರವೀಣ್ ಪೂಜಾರಿ ಮಾತನಾಡಿ, ನಾರಾಯಣ ಗುರುಗಳ ಜಯಂತಿಯನ್ನು ತಾಲೂಕು ಆಡಳಿತ ನಡೆಸದಿದ್ದರೆ ನಾವು ಖಾಸಗಿಯಾಗಿ ವಿಜೃಂಭಣೆಯಿಂದ ಆಚರಿಸುತ್ತೇವೆ. ಗುರುಗಳ ಜಯಂತಿ ಆಚರಿಸಲು ನಿರ್ಲಕ್ಷೃ ತೋರುತ್ತಿರುವುದಕ್ಕೆ ಅಧಿಕಾರಿಗಳು ಕಾರಣ ನೀಡಬೇಕು. ನಾರಾಯಣ ಗುರುಗಳು ಎಲ್ಲ ಸಮುದಾಯಕ್ಕೂ ಸೇರಿದ ವಿಶ್ವಗುರುಗಳಾಗಿದ್ದಾರೆ. ಇಂಥ ಮಹಾತ್ಮರ ಜಯಂತಿ ಆಚರಣೆಗೆಂದು ಕರೆದ ಪೂರ್ವಭಾವಿ ಸಭೆಗೆ ಒಂದೇ ಸಮುದಾಯದವರನ್ನು ಕರೆದಿರುವುದು ಸರಿಯಲ್ಲ. ಸಭೆಯನ್ನು 2ನೇ ಬಾರಿ ಮುಂದೂಡುವ ಮೂಲಕ ನಮ್ಮ ಸಮುದಾಯಕ್ಕೆ ಹಾಗೂ ನಾರಾಯಣ ಗುರುಗಳಿಗೆ ಅವಮಾನ ಮಾಡಿದಂತಾಗಿದೆ. ಜಿಲ್ಲಾಧಿಕಾರಿ ತಹಸೀಲ್ದಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಸಂಘದ ಕಾರ್ಯದರ್ಶಿ ಅರುಣ್ ಪೂಜಾರಿ, ಮುಖಂಡರಾದ ಯೋಗೇಶ್ ಪೂಜಾರಿ, ತಾರು ಪೂಜಾರಿ, ನಾಗರಾಜ್ ಪೂಜಾರಿ, ವೆಂಕಟೇಶ್ ಪೂಜಾರಿ, ಪೃಥ್ವಿ, ಸಾಗರ್, ನವೀನ್ ಪೂಜಾರಿ, ಗಣೇಶ್ ಪೂಜಾರಿ, ಗೀತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net